ಸರಗೂರು: ತಾಲೂಕಿನಲ್ಲಿ ಫಸಲು ತಿಂದು, ನಾಶಪಡಿಸಿ ಸಾರ್ವಜನಿಕರಿಗೆ ಉಪಟಳ ನೀಡುತ್ತಿದ್ದ ಕಾಡಾನೆಗಳನ್ನು ಡ್ರೋನ್ ಕಾರ್ಯಾಚರಣೆ ಮೂಲಕ ಕಾಡಿಗಟ್ಟುವ ಕಾರ್ಯ ಆರಂಭವಾಗಿದ್ದು, ಕಾಡಾನೆಯನ್ನು ಕಾಡಿಗೆ ಹೊರಡಿಸಲು ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಕಳೆದ ಆರು ದಿನಗಳಿಂದ ನಡೆಯುತ್ತಿರುವ ಈ ಕಾರ್ಯಾಚರಣೆಯಿಂದ ಮೂರು ಕಾಡಾನೆಗಳನ್ನು ಮೊಳೆಯೂರು ವನ್ಯಜೀವಿ ವಲಯಕ್ಕೆ ಹಿಮ್ಮೆಟ್ಟಿಸಲಾಗಿದೆ. ಕಾಡಾನೆಗಳ ಹಾವಳಿ ಹೆಚ್ಚಾಗಿರುವುದನ್ನು ವಿರೋಧಿಸಿ ಗ್ರಾಮಸ್ಥರು, ರೈತರು ಮತ್ತು ಸಂಘ–ಸಂಘಗಳು ತೀವ್ರ ಪ್ರತಿಭಟನೆ ನಡೆಸಿದ್ದ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ನಡೆಸಲಾಯಿತು ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.
ಉಪ ಅರಣ್ಯ ಸಂರಕ್ಷಣಾಧಿಕಾರಿ ಡಿಸಿಎಫ್ ನಂದೀಶ್.ಎಲ್ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಸಿಎಫ್ ಸುಮಿತ್ರ ಎಸ್‌ರವರ ನೇತೃತ್ವದಲ್ಲಿ ಎಲ್ ಟಿಎಫ್ ತಂಡ, ಇಟಿಎಫ್ ಹುಣಸೂರು ತಂಡ ಡೋನ್ ಕಾರ್ಯಾಚರಣೆ ಕೈಗೊಂಡು, ಕಾಡಾನೆಗಳನ್ನು ಕಾಡಿಗೆ ಹಿಮ್ಮೆಟ್ಟಿಸುವ ಕಾರ್ಯ ನಡೆಸಿದರು.
ನಮ್ಮ ಕಾಡಿನ ಹತ್ತಿರ ರೈತರ ಜಮೀನುಗಳು ಇದ್ದು, ಈ ಸಮಯದಲ್ಲಿ ಕಾಡು ಪ್ರಾಣಿಗಳನ್ನು ಹಾಗೂ ಕಾಡಾನೆಗಳನ್ನು ಕಾಡಿಗೆ ಹಿಮ್ಮೆಟ್ಟಿಸಿದರೂ ಮತ್ತೆ ಮತ್ತೆ ಜಮೀನಿಗೆ ಬರುತ್ತಿವೆ. ಕಾಡಿನ ಹತ್ತಿರ ಜಮೀನಿನಲ್ಲಿ ರೈತರು ಬಾಳೆ, ಇತರೆ ಬೆಳೆಯನ್ನು ಬೆಳೆಯುತ್ತಾರೆ. ಹೀಗಾಗಿ ಅವನ್ನು ತಿನ್ನಲು ಕಾಡಾನೆಗಳು ಪ್ರತಿದಿನ ಕಾಡು ಬಿಟ್ಟು ಜಮೀನಿಗೆ ಬರುತ್ತಿವೆ. ಇದರಿಂದ ನಾವುಗಳು ರಾತ್ರಿ ಹಗಲು ಎನ್ನದೆ ಪ್ರತಿದಿನ ಕಾಡಾನೆಗಳನ್ನು ಕಾಡಿಗೆ ಓಡಿಸಿದ್ದರೂ, ಇನ್ನೂ ಯಾವುದೋ ಕಡೆಯಿಂದ ಮತ್ತೆ ಬರುತ್ತಿವೆ. ನಾವುಗಳು ಕಾಡಾನೆ ಎಲ್ಲಿ ಬರುತ್ತೋ ಅನ್ನೋದಕ್ಕೆ ಡ್ರೋನ್ ಕ್ಯಾಮೆರಾ ಬಳಸಿಕೊಂಡು ಕಂಡು ಹಿಡಿಯಲು ಮುಂದಾಗಿದ್ದು, ಅದರಲ್ಲಿ ಮೂರು ಕಾಡಾನೆಯನ್ನು ಕಾಡಿಗೆ ಓಡಿಸಿದ್ದೇವೆ. ಇನ್ನೂ ಒಂದು ಆನೆಯನ್ನು ಇಂದು ನಾಳೆ ಹೊರಡಿಸಲಾಗುವುದು ಎಂದು ಎಸಿಎಫ್ ಸುಮೀತ್ರ ಎಸ್ ತಿಳಿಸಿದರು.
ಕಾಡಂಚಿನ ಭಾಗದಲ್ಲಿ ರೈತರ ಜಮೀನು ಇರುವುದರಿಂದ ಬಾಳೆ ತೋಟವನ್ನು ಮಾಡಲು ಮುಂದಾಗುತ್ತಾರೆ, ಇದನ್ನು ಕಾಡಾನೆ ನಾಶ ಮಾಡುತ್ತಿದೆ. ಹಾಗಾಗಿ ಬಾಳೆ ತೋಟ ಬಿಟ್ಟು ಬೇರೆ ಬೆಳೆಯನ್ನು ಮುಂದಾಗಿ ಎಂದು ರೈತರಿಗೆ ಸಲಹೆ ನೀಡಿದರು.
ನಿರಂತರವಾಗಿ ಸುರಿಯುವ ಮಳೆಯನ್ನು ಲೆಕ್ಕಿಸದೆ ಈಗಾಗಲೇ 3 ಕಾಡಾನೆಗಳನ್ನು ಮೊಳೆಯೂರು ವನ್ಯಜೀವಿ ವಲಯಕ್ಕೆ ಹಿಮ್ಮೆಟ್ಟಿಸಲಾಗಿದೆ. ಪ್ರತಿದಿನ ರಾತ್ರಿ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಸಾರ್ವಜನಿಕರು ಕಾಡಾನೆ ಕಂಡು ಬಂದರೆ ಭಯಪಡದೆ ತಕ್ಷಣ ಅರಣ್ಯ ಇಲಾಖೆಗೆ ತಿಳಿಸಿದರೆ ಕಾಡಾನೆಗಳನ್ನು ಕಾಡಿಗೆ ಹಿಮ್ಮೆಟ್ಟಿಸುವ ಕಾರ್ಯ ಮಾಡಲಾಗುತ್ತದೆ ಎಂದು ಸರಗೂರು ವಲಯದ ಆರ್ ಎಫ್ ಓ ಮಹಾಲಕ್ಷ್ಮಿ ತಿಳಿಸಿದ್ದಾರೆ.
ಸರಗೂರು ವಲಯದ ಆರ್ ಎಫ್ ಓ ಮಹಾಲಕ್ಷ್ಮಿ, ನಂಜನಗೂಡು ವಲಯದ ಆರ್ ಎಫ್ ಓ ನಿತೀನ್ ಮತ್ತು ನುಗು ವಲಯದ ಆರ್ ಎಫ್ ಓ ವಿವೇಕ್ ಜೊತೆಯಲ್ಲಿ ಸರಗೂರು ವಲಯದ ಎಲ್ಲಾ ಡಿಆರ್‌ಎಫ್ ಓ ಅಕ್ಷಯ್ ,ಹಾಗೂ ಸಿಬ್ಬಂದಿಗಳು ಸೇರಿದಂತೆ ಹಾಜರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


