ತಿಪಟೂರು: ಕಟ್ಟಕಡೆಯ ಸಾರ್ವಜನಿಕರಿಗೆ ಬೇಗನೆ ಅನುಕೂಲ ಮತ್ತು ಸಹಾಯ ಪಡೆಯಲು ಸಹಕಾರಿ ಕ್ಷೇತ್ರ ಎಷ್ಟೋ ಜನರ ಆಪದ್ಬಾಂಧವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಶ್ರೀ ಗುರುಮಲ್ಲಿಕಾರ್ಜುನ ಸ್ವಾಮಿ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತ ಮತ್ತು ತಮ್ಮಡಿಹಳ್ಳಿ ವಿರಕ್ತಮಠಧ್ಯಕ್ಷರಾದ ಶ್ರೀ ಡಾ.ಅಭಿನವ ಮಲ್ಲಿಕಾರ್ಜುನ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.
ನಗರದ ಗೊರಗೊಂಡನಹಳ್ಳಿ ಶ್ರೀ ಅಭಿನವ ಸದನದ ಆವರಣದಲ್ಲಿ ಶ್ರೀ ಗುರುಮಲ್ಲಿಕಾರ್ಜುನ ಸ್ವಾಮಿ ವಿವಿಧೋದ್ದೇಶ ಪತ್ತಿನ ಸಹಕಾರ ಸಂಘ ನಿಯಮಿತದ 2024–25 ನೇ ಸಾಲಿನ 14ನೇ ವರ್ಷದ ಸರ್ವ ಸದಸ್ಯರುಗಳ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದ ಶ್ರೀಗಳು, ಭಾರತ ದೇಶ ಸಂಸ್ಕೃತಿ, ಸಾಹಿತ್ಯ, ಸಾಂಸ್ಕೃತಿಕ ಮತ್ತು ಸಾಮಾಜಿಕ ಸೇವೆಗೆ ಹೆಸರುವಾಸಿಯಾಗಿದೆ. ಅದರಲ್ಲೂ ಕರ್ನಾಟಕ ರಾಜ್ಯ ಸಹಕಾರಿ ಕ್ಷೇತ್ರದಲ್ಲಿ ತನ್ನದೇ ಚಾಪು ಮೂಡಿಸಿ, ಸಾರ್ವಜನಿಕರಿಗೆ ಸ್ಪಂದಿಸುವಲ್ಲಿ ಮಹತ್ತರ ಬೆಳವಣಿಗೆ ಸಾಧಿಸಿದೆ. ನಾವುಗಳು ನೊಂದವರಲ್ಲಿ ಮತ್ತು ಬೆಂದವರಲ್ಲಿ ದೇವರನ್ನು ಕಾಣುತ್ತಾ ಸೇವೆಗೆ ಮುಡಿಪಾಗಿದ್ದೇವೆ. ನಿಮ್ಮದೇ ಹಣವನ್ನು ದುರುಪಯೋಗಪಡಿಸಿಕೊಳ್ಳದೆ ಸಹಕಾರಿಯ ಬೆಳವಣಿಗೆಗೆ ಸಹಕರಿಸಿ ಎಂದು ತಿಳಿಸಿದರು.
ಕುಮಾರ್ ಆಸ್ಪತ್ರೆ ವೈದ್ಯ ಡಾ.ಜಿ.ಎಸ್.ಶ್ರೀಧರ್ ಮಾತನಾಡಿ, ಸಹಕಾರ ಕ್ಷೇತ್ರದ ಅಭಿವೃದ್ಧಿಗೆ ಸದಸ್ಯರ ಪಾಲ್ಗೊಳ್ಳುವಿಕೆ ಮತ್ತು ನಿಗದಿತ ಸಮಯಕ್ಕೆ ಸಾಲ ಹಿಂದಿರಿಸುವಿಕೆಯಿಂದ ಸಹಕಾರಿ ಸಂಸ್ಥೆ ಮುಂದೆ ಬರಲು ಸಾಧ್ಯವಾಗುತ್ತದೆ. ಸಹಕಾರಿಯಿಂದ ಎಷ್ಟು ಸಾಧ್ಯವಾಗುತ್ತದೆ, ಅಷ್ಟನ್ನು ಪಡೆದು ನಿಗದಿತ ಸಮಯಕ್ಕೆ ಹಿಂದಿರುಗಿಸಿದಾಗ, ಮತ್ತೊಬ್ಬರಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಹೃದಯ ತಜ್ಞ ಡಾ.ಜಿ.ಬಿ.ವಿವೇಚನ್ ಮಾತನಾಡಿ, ಸಹಕಾರಿಯಿಂದ ಜನರಿಗೆ ಅಭಿವೃದ್ಧಿಗೆ ಮತ್ತು ಜೀವನಾಂಶಕ್ಕೆ ಅನುಕೂಲಕರವಾಗಿದೆ. ಸಹಕಾರಿಯಿಂದ ದೊರೆಯುವ ಸೌಲಭ್ಯಗಳನ್ನು ಪಡೆದು ಅಭಿವೃದ್ಧಿ ಹೊಂದಬೇಕು.ಶ್ರೀಗಳ ಆಶೀರ್ವಾದದಿಂದ ಸಹಕಾರಿಯು ಇನ್ನು ಉನ್ನತ ಮಟ್ಟಕ್ಕೆ ಹೋಗಲಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಹಕಾರಿ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ನಿವೃತ್ತ ಲೆಕ್ಕ ಪರಿಶೋಧಕ ಸಾಸಲು ಚಂದ್ರಶೇಖರ್, ಸಹಕಾರಿಯ ಉಪಾಧ್ಯಕ್ಷ ಬಿ.ಎಸ್.ಬಸವರಾಜಪ್ಪ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಲ್.ಕೆ. ದೇವರಾಜು, ನಿರ್ದೇಶಕ ಬಿ. ಸದಾಶಿವಯ್ಯ, ನಗರಸಭಾ ಸದಸ್ಯೆ ಅಶ್ವಿನಿ ದೇವರಾಜ್, ಚಿಕ್ಕಮಗಳೂರು ರಾಜಕುಮಾರ್, ನಿವೃತ್ತ ಶಿಕ್ಷಕ ನಂದೀಶ್, ವಕೀಲ ಸದಾಶಿವಯ್ಯ, ಬೆಳಗರಳ್ಳಿ ಅಶೋಕ್, ಶಶಿಧರ್, ಮಹಾಲಿಂಗಯ್ಯ ಮತ್ತು ಲೆಕ್ಕ ಸಹಾಯಕ ಮಧು ಸೇರಿದಂತೆ ನಿರ್ದೇಶಕರು, ಸದಸ್ಯರು, ಸಿಬ್ಬಂದಿ ವರ್ಗ ಮತ್ತು ಪಿಗ್ಮಿ ಏಜೆಂಟರು ಭಾಗವಹಿಸಿದ್ದರು.
ವರದಿ: ಆನಂದ್ ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC