ಬೆಂಗಳೂರು: ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮ ಬದ್ದಗೊಳಿಸುವಿಕೆ (ಪಿಎಂಎಫ್ ಎಂಇ) ಯೋಜನೆಯು ಕರ್ನಾಟಕದ ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವದ ಈ ಯೋಜನೆಯಡಿ, ರಾಜ್ಯ ಸರ್ಕಾರವು ಹೆಚ್ಚುವರಿ ಶೇ.15ರಷ್ಟು ಸಹಾಯಧನ ನೀಡುತ್ತಿದ್ದು, ಕಿರು ಉದ್ದಿಮೆದಾರರಿಗೆ ಶೇ.50ರಷ್ಟು ಅಥವಾ ಗರಿಷ್ಠ ರೂ.15 ಲಕ್ಷ ಸಾಲ ಸಂಪರ್ಕಿತ ಸಹಾಯಧನ ಲಭ್ಯವಾಗುತ್ತಿದೆ. ಇದರಲ್ಲಿ ಕೇಂದ್ರದ ರೂ.6 ಲಕ್ಷ ಹಾಗೂ ರಾಜ್ಯದ ರೂ.9 ಲಕ್ಷ ಸಹಾಯಧನ ಸೇರಿದೆ.
ಈ ಯೋಜನೆಯ ಯಶಸ್ಸಿಗೆ ಕಾರಣರಾದ ಕರ್ನಾಟಕದ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರ ನಾಯಕತ್ವ ಹಾಗೂ ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿಯಮಿತ (ಕೆಪೆಕ್) ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್. ಶಿವಪ್ರಕಾಶ್ ಅವರ ಅವಿರತ ಶ್ರಮವನ್ನು ಉದ್ಯಮಿಗಳು ಮತ್ತು ರೈತರು ವ್ಯಾಪಕವಾಗಿ ಮೆಚ್ಚಿದ್ದಾರೆ.
ವಾರ್ಷಿಕ ಸಾಲ ಮಂಜೂರಾತಿಯ ಪ್ರಗತಿ: ಪಿಎಂಎಫ್ಎಂಇ ಯೋಜನೆಯಡಿ ಕಳೆದ ಐದು ಸಾಲುಗಳಲ್ಲಿ ಸಹಾಯ ಧನದಡಿಯಲ್ಲಿ ಸಾಲ ಮಂಜೂರಾತಿಯಲ್ಲಿ ಗಣನೀಯ ಏರಿಕೆಯಾಗಿದೆ. 2021–22 ಸಾಲಿನಲ್ಲಿ ಒಟ್ಟು 259 ಸಾಲಗಳು ಮಂಜೂರಾಗಿದ್ದವು, ಇದು 2022-23ರಲ್ಲಿ 1813ಗೆ, 2023–24ರಲ್ಲಿ 1,997ಗೆ, 2024–25ರಲ್ಲಿ 2321ಗೆ ಮತ್ತು 2025–26ರ ಮೊದಲ ತ್ರೈಮಾಸಿಕದಲ್ಲಿ 314 ಹಾಗೂ 2ನೆ ತ್ರೈಮಾಸಿಕದ ಆಗಸ್ಟ್ ಅಂತ್ಯದವರೆಗೆ 390 ಸಾಲಗಳು ಮಂಜೂರಾಗಿವೆ.
ಇದು ಗ್ರಾಮೀಣ ಯುವಕ-ಯುವತಿಯರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಿ, ವಲಸೆಯನ್ನು ತಡೆಗಟ್ಟಿ, ರೈತರ ಉತ್ಪನ್ನಗಳಿಗೆ ಮೌಲ್ಯವರ್ಧನೆ ಮಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ.
ಮಾನ್ಯ ಮುಖ್ಯಮಂತ್ರಿಗಳು 2025–26ನೇ ಸಾಲಿನ ಆಯವ್ಯಯ ಭಾಷಣದಲ್ಲಿ ರಾಜ್ಯದಲ್ಲಿ ಹೆಚ್ಚುವರಿ 5000 ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳನ್ನು ಸ್ಥಾಪಿಸುವ ಗುರಿ ಘೋಷಿಸಿದ್ದು, ಇದಕ್ಕಾಗಿ ರೂ.206 ಕೋಟಿ ಅನುದಾನ ಒದಗಿಸಿದ್ದಾರೆ. ಈ ಗುರಿ ಸಾಧನೆಯತ್ತ ರಾಜ್ಯವು ಭರದಿಂದ ಸಾಗುತ್ತಿದ್ದು, ಕೃಷಿ ಸಚಿವ ಚೆಲುವರಾಯಸ್ವಾಮಿ ಅವರ ಮಾರ್ಗದರ್ಶನದಲ್ಲಿ ಕೆಪೆಕ್ ಸಂಸ್ಥೆಯು ಯೋಜನೆಯನ್ನು ಸಮರ್ಥವಾಗಿ ಅನುಷ್ಠಾನಗೊಳಿಸುತ್ತಿದೆ. ಕೆಪೆಕ್ ಸಂಸ್ಥೆಯು ಯೋಜನೆಯ ರಾಜ್ಯ ನೋಡಲ್ ಏಜೆನ್ಸಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ವ್ಯವಸ್ಥಾಪಕ ನಿರ್ದೇಶಕ ಸಿ.ಎನ್. ಶಿವಪ್ರಕಾಶ್ ಅವರ ನೇತೃತ್ವದಲ್ಲಿ ಅನೇಕ ನವೀನ ಕ್ರಮಗಳನ್ನು ಕೈಗೊಂಡಿದೆ.
ಪ್ರಸ್ತುತ ಆರ್ಥಿಕ ವರ್ಷದ (2025-26) ಪ್ರಾರಂಭದಿಂದಲೂ ಯೋಜನೆಯ ಅನುಷ್ಠಾನವನ್ನು ಚುರುಕುಗೊಳಿಸಲಾಗಿದ್ದು, ಜಿಲ್ಲಾವಾರು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಜಿಲ್ಲಾ ಉಸ್ತುವಾರಿ ಸಚಿವರ ಮುಂದಾಳತ್ವದಲ್ಲಿ ಆಯೋಜಿಸಲಾಗುತ್ತಿದೆ. ಈಗಾಗಲೇ 19 ಜಿಲ್ಲೆಗಳಲ್ಲಿ ಇಂತಹ ಕಾರ್ಯಕ್ರಮಗಳು ನಡೆದಿದ್ದು, ಪ್ರತಿ ಕಾರ್ಯಕ್ರಮದಲ್ಲಿ 300-400 ಸಂಭಾವ್ಯ ಉದ್ದಿಮೆದಾರರು ಮತ್ತು ರೈತರು ಭಾಗವಹಿಸಿ ಅರ್ಜಿ ಸಲ್ಲಿಕೆಗೆ ಮುಂದಾಗಿದ್ದಾರೆ. ಉದ್ದಿಮೆದಾರರಿಗೆ ಸಹಾಯ ಹಸ್ತ ನೀಡಲು ಕೆಪೆಕ್ ಸಂಸ್ಥೆಯು ಇತ್ತೀಚೆಗೆ 89 ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳನ್ನು ನೇಮಕ ಮಾಡಿದ್ದು, ಇನ್ನೂ 100 ಜನರ ನೇಮಕ ಪ್ರಕ್ರಿಯೆ ಪ್ರಗತಿಯಲ್ಲಿದೆ. ಸಹಾಯವಾಣಿ ಕೇಂದ್ರ ಸ್ಥಾಪನೆ, ಬ್ಯಾಂಕಿಂಗ್ ಸಲಹಾ ಕೋಶ (3 ನುರಿತ ತಜ್ಞರೊಂದಿಗೆ), ಪರಿಶಿಷ್ಠ ಜಾತಿ/ಪಂಗಡದ ಉದ್ದಿಮೆದಾರರಿಗೆ ವಿಶೇಷ ಅಭಿಯಾನ ಮತ್ತು ಪ್ರತ್ಯೇಕ ಸಹಾಯವಾಣಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಎಲ್ಲಾ ಪ್ರಮುಖ ಬ್ಯಾಂಕುಗಳ ಉನ್ನತ ಅಧಿಕಾರಿಗಳೊಂದಿಗೆ ಸಭೆಗಳು ನಡೆದಿದ್ದು, ಬ್ಯಾಂಕಿನಲ್ಲಿ ಬಾಕಿ ಇರುವ ಅರ್ಜಿಗಳ ತ್ವರಿತ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗಿದೆ. ಈ ಎಲ್ಲಾ ಪ್ರಯತ್ನಗಳು ಸಿ.ಎನ್. ಶಿವಪ್ರಕಾಶ್ ಅವರ ದೂರದೃಷ್ಟಿ ಮತ್ತು ಸಮರ್ಪಣೆಯ ಫಲವಾಗಿದ್ದು, ಯೋಜನೆಯ ಪ್ರಗತಿಯನ್ನು ದ್ವಿಗುಣಗೊಳಿಸಿದೆ.
ಪ್ರಸ್ತುತ ಆರ್ಥಿಕ ವರ್ಷದ (2025–26) ಪ್ರಗತಿಯು ಅಭೂತಪೂರ್ವವಾಗಿದ್ದು, ಆಗಸ್ಟ್ ಮಾಹೆಯ ಅಂತ್ಯಕ್ಕೆ 2937 ಅರ್ಜಿಗಳು ಸಲ್ಲಿಕೆಯಾಗಿದ್ದು, 704 ಸಾಲಗಳು ಮಂಜೂರಾಗಿವೆ. ಇದರ ಮೂಲಕ ರೂ.109.24 ಕೋಟಿ ಹೂಡಿಕೆಯಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


