ಮಧುಗಿರಿ: ನ್ಯಾಯಾಲಯದಲ್ಲಿರುವ ಸಾರ್ವಜನಿಕರ ಹಲವಾರು ಪ್ರಕರಣಗಳಿಗೆ ರಾಜಿ ಪಂಚಾಯ್ತಿ ಮೂಲಕ ತೆರೆ ಎಳೆಯಲು ನ್ಯಾಯಾಂಗ ಇಲಾಖೆ ಸಿದ್ಧವಿದ್ದು, ಇದೇ ಸೆ.13 ಕ್ಕೆ ಜಿಲ್ಲಾ ನ್ಯಾಯಾಲಯದಲ್ಲಿ ಲೋಕ್ ಅದಾಲತ್ ಕಾರ್ಯಕ್ರಮ ಏರ್ಪಡಿಸಿದ್ದು, ನೊಂದವರು ಯಾವುದೇ ಶುಲ್ಕವಿಲ್ಲದೆ ನಿಮ್ಮ ಸಮಸ್ಯೆಗೆ ನೇರವಾಗಿ ಅಥವಾ ವಕೀಲರ ಮೂಲಕವಾಗಲಿ ಪರಿಹಾರ ಕಂಡುಕೊಳ್ಳಬಹುದಾಗಿದ್ದು, ಈ ಅವಕಾಶವನ್ನು ಸಾರ್ವಜನಿಕರು ಸದುಪಯೋಗ ಮಾಡಿಕೊಳ್ಳುವಂತೆ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಬಿ.ವೆಂಕಟಪ್ಪ ತಿಳಿಸಿದ್ದಾರೆ.
ಪಟ್ಟಣದ ಹೊರವಲಯದಲ್ಲಿರುವ ನ್ಯಾಯಾಲಯ ಸಂಕೀರ್ಣದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನ್ಯಾಯಾಧೀಶರು, ಇದೇ ಮಧುಗಿರಿ ನ್ಯಾಯಾಲಯದಲ್ಲಿ ಸೆ.13 ಶನಿವಾರ ನಡೆಯಲಿರುವ ಲೋಕ್ ಆದಾಲತ್ ಸೇವೆಯನ್ನು ಸಾರ್ವಜನಿಕರು ಭಾಗಿಯಾಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು, 2007ರಲ್ಲಿ ಸರ್ಕಾರ ಸ್ಥಾಪಿಸಿರುವ ಖಾಯಂ ಜನತಾ ನ್ಯಾಯಾಲಯದಲ್ಲಿ ಸಾರ್ವಜನಿಕ ಉಪಯುಕ್ತ ಸೇವೆಗಳಿಗೆ ಸಂಬಂಧಿಸಿದಂತೆ ವಿವಾದಗಳನ್ನು ರಾಜಿ ಮತ್ತು ವಿಚಾರಣೆ ಮೂಲಕ ತೀರ್ಮಾನ ಮಾಡುವ ಅಧಿಕಾರವನ್ನು ಹೊಂದಿರುತ್ತದೆ. ಅದರಂತೆ ಸಾರಿಗೆ ಇಲಾಖೆಯಿಂದ ಬಂದಿರುವ ದಂಡ ಪಾವತಿ, ಅಂಚೆ ಇಲಾಖೆಯ ಸೇವೆಗಳು, ವಿದ್ಯುತ್, ಬೆಳಕು, ನೀರು ನೀಡುವ ಸಂಸ್ಥೆಗಳ ಸೇವೆಗಳು ಸಾರ್ವ ಜನಿಕ ನೈರ್ಮಲ್ಯ ವ್ಯವಸ್ಥೆ, ಚರಂಡಿ ವ್ಯವಸ್ಥೆಗಳು, ವಿಮಾ, ಆಸ್ಪತ್ರೆ, ಔಷಧಗಳು ಮತ್ತು ಆರೋಗ್ಯ ಸೇವೆಗಳು, ಶಿಕ್ಷಣ, ಶಿಕ್ಷಣ ಸಂಸ್ಥೆಗಳ ಸೇವೆಗಳು, ಎಲ್ ಪಿಜಿ ಗ್ಯಾಸ್ ಸೇವೆಗಳು, ಬ್ಯಾಂಕುಗಳು, ಹಣಕಾಸು ನಾಲ ಸೌಲಭ್ಯಗಳ ಸೇವೆಗಳು, 1 ಕೋಟಿ ಮೌಲ್ಯದ ಇತರೆ ಪ್ರಕರಣಗಳಲ್ಲಿ ನ್ಯಾಯ ನಿರೀಕ್ಷಿಸಬಹುದಾಗಿದೆ ಎಂದರು.
ಅಲ್ಲದೆ ಉಭಯತ್ರಯರು ರಾಜಿ ಸಂಧಾನಕ್ಕೆ ಮುಂದಾಗದಿದ್ದರೆ ತ್ವರಿತ ವಿಚಾರಣೆ ನಡೆಸಿ ಕಾನೂನು ರೀತಿ ತೀರ್ಪು ನೀಡಲಾಗುವುದು. ಈ ಖಾಯಂ ಜನತಾ ನ್ಯಾಯಾಲಯದಲ್ಲಿ ನೀಡುವ ತೀರ್ಪನ್ನು ಯಾವುದೇ ಸ್ಥಳೀಯ ಸಿವಿಲ್ ಅಥವಾ ಜಿಲ್ಲಾ ನ್ಯಾಯಾಲಯದಲ್ಲಿ ಪ್ರಶ್ನಿಸಲು ಬರುವುದಿಲ್ಲ. ಆದರೆ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿ ಪ್ರಶ್ನಿಸಲು ಮಾತ್ರ ಅವಕಾಶವಿದೆ. ಖಾಯಂ ನ್ಯಾಯಾಲಯವು ನೀಡಿದ ತೀರ್ವ ಸ್ಥಾನಿಕ ಅಧಿಕಾರ ವ್ಯಾಪ್ತಿ ಹೊಂದಿರುವ ಸಿವಿಲ್ ನ್ಯಾಯಾಲಯವು ತಮ್ಮ ನ್ಯಾಯಾಲಯವೇ ಮಾಡಿದ ಡಿಕ್ಕಿಯೆಂದು ಪರಿಗಣಿಸಿ ಜಾರಿ ಮಾಡುವ ಅಧಿಕಾರ ಹೊಂದಿರುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಅಮರನಾಥ್ ಬಿ.ಎನ್. ಜೊತೆಗಿದ್ದರು.
ಯಾವುದೇ ಬ್ಯಾಂಕಿನ ಹಣ ಕಾಸು ಸಾಲ ಸೌಲಭ್ಯ, ಚೆಕ್ ಪೂರಣಗಳು, ಇತರ ಹಣ ವರ್ಗಾವಣೆಯ ಪ್ರಕರಣಗಳಲ್ಲಿ ಕಾನೂನು ನಿಗದಿಪಡಿಸಿರುವಂತೆ ಶೇ.40 ರಿಂದ ಶೇ.50 ರಷ್ಟು ಬಿಡುಗಡೆ ನೀಡಿ, ಸಬ್ಸಿಡಿಯ ಸೌಲಭ್ಯವನ್ನು ನೀಡುವುದಲ್ಲದೆ ಒಟಿಎಸ್ (ಒನ್ ಟೈಮ್ ಸೆಟಲ್ ಮೆಂಟ್ ) ಮೂಲಕ ಬಗೆಹರಿಸಲಾಗುವುದು ನೊಂದವರು ಈ ಯೋಜನೆಯ ಲಾಭ ಪಡೆಯಬೇಕು.
— ಬಿ.ವೆಂಕಟಪ್ಪ, ಪ್ರಧಾನ ಹಿರಿಯ ಸಿವಿಲ್, ನ್ಯಾಯಾಧೀಶರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC