ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮದ ರೈತ ಮಹಿಳೆ ನೀಡಿದ್ದ ದೂರಿನ ಅನ್ವಯ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ನೌಕರರು ಸೇರಿ 15 ಮಂದಿ ವಿರುದ್ದ ಭಾನುವಾರ ಪ್ರಕರಣ ದಾಖಲಾಗಿದೆ.
ಅರಣ್ಯ ಇಲಾಖೆ ಡಿಆರ್ ಎಫ್ ಒ ಜ್ಞಾನಶೇಖರ್, ಡಿಆರ್ ಎಫ್ ಒ ಕಾರ್ತಿಕ್ ಯಾದವ್, ಎಸಿಎಫ್ ಸುರೇಶ್, ಡಿಆರ್ ಎಫ್ ಒ ಶಿವಕುಮಾರ್ ಇತರ ನೌಕರರಾದ ಶಿವಣ್ಣ, ಸುಚಿತ್ರ, ಸುಬ್ರಹ್ಮಣ್ಯ, ನಾಗೇಶ್, ಸೋಮು, ಪ್ರವೀಣ್, ಮಣಿಕಂಠ, ವಿನಯ್ ಕುಮಾರ್, ಸಂತೋಷ್, ರಾಜಪ್ಪ ಹಾಗೂ ಬಸವೇಗೌಡ ಎಂಬುವರ ವಿರುದ್ದ ಎಫ್ ಐಆರ್ ದಾಖಲು ಮಾಡಲಾಗಿದೆ.
ಬೊಮ್ಮಲಾಪುರ ಗ್ರಾಮದ ರೈತ ಮಹಿಳೆ ಕಮಲಮ್ಮ ಎಂಬುವರು, ಅರಣ್ಯ ಇಲಾಖೆಯವರು ತನ್ನ ಕೈ ಹಿಡಿದು ಎಳೆದಾಡಿ, ಕಪಾಳಕ್ಕೆ ಹೊಡೆದು, ತಳ್ಳಿ ಬೀಳಿಸಿದ್ದಾರೆ. ಅಲ್ಲದೆ, ನನ್ನ ಮಗ ಗಂಗಾಧರ ಸ್ವಾಮಿ ಮತ್ತು ನಮ್ಮ ಜಮೀನಿನ ಬಾಜುದಾರರಾದ ರಘು, ಪ್ರದೀಪ್, ರೇವಣ್ಣ ಅವರುಗಳಿಗೆ ಕೈನಿಂದ ಹೊಡೆದು ನನ್ನ ಮಗನನ್ನು ಕೊಲೆ ಮಾಡುವ ಉದ್ದೇಶದಿಂದ ಕತ್ತು ಹಿಡಿದು ಹಿಸುಕಲು ಯತ್ನಿಸಿದ್ದಾರೆ. ಪ್ರಸಾದ್ ಮೇಲೆ ಜೀಪ್ ಹತ್ತಿಸಿ ಹತ್ಯೆಗಯ್ಯಲು ಯತ್ನ ಮಾಡಲಾಗಿದೆ ಎಂದು ಆರೋಪಿಸಿ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ದೂರು ಸಲ್ಲಿಸಿದ್ದರು.
ಸೆ.9ರಂದು ಬೊಮ್ಮಲಾಪುರ ಗ್ರಾಮದಲ್ಲಿ ಹುಲಿ ಸೆರೆ ವಿಷಯದಲ್ಲಿ ಇಲಾಖೆ ನೌಕರರನ್ನು ಬೋನ್ನಲ್ಲಿ ಕೂಡಿ ಹಾಕಿ, ಬೆದರಿಕೆ ಒಡ್ಡಿದ್ದ ಆರೋಪದ ಮೇಲೆ ಐದು ಮಂದಿ ರೈತರ ವಿರುದ್ಧ ಅರಣ್ಯ ಇಲಾಖೆಯವರು ದೂರು ನೀಡಿದ್ದರು. ಈ ಬಗ್ಗೆ ಅದೇ ದಿನ ಪ್ರಕರಣ ದಾಖಲಾಗಿತ್ತು. ಅದಾದ ಬಳಿಕ ರೈತರು ಪ್ರತಿದೂರು ಕೊಟ್ಟಿದ್ದರು. ಆದರೆ ಎಫ್ ಐಆರ್ ದಾಖಲಾಗಿಲ್ಲ ಎಂದು ರೈತರು ಧರಣಿಗೆ ಕರೆ ಕೊಟ್ಟಿದ್ದರು. ಈಗ ಅರಣ್ಯ ಇಲಾಖೆಯವರ ವಿರುದ್ದ ರೈತ ಮಹಿಳೆ ನೀಡಿದ್ದ ದೂರಿನ ಅನ್ವಯ ಕೇಸ್ ದಾಖಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC