ತುರುವೇಕೆರೆ: ಸಾಹಿತ್ಯ ಎಲ್ಲರನ್ನು ಆಕರ್ಷಣೆ ಮಾಡುವ ಸಂವೇದನಾಶೀಲ ಕ್ಷೇತ್ರ. ಸಮ್ಮೇಳನ ಕನ್ನಡದ ಪ್ರಜ್ಞೆ ವಿಸ್ತರಿಸುವ ಕೆಲಸ ಮಾಡಬೇಕು ಎಂದು ಚಿಂತಕ ಬರಗೂರು ರಾಮಚಂದ್ರಪ್ಪ ಹೇಳಿದರು.
ವೈ.ಟಿ.ರಸ್ತೆಯಲ್ಲಿನ ಸತ್ಯಗಣಪತಿ ಆಸ್ಥಾನ ಮಂಟಪದಲ್ಲಿ ಸೋಮವಾರ ನಡೆದ ತುರುವೇಕೆರೆ ತಾಲ್ಲೂಕು ಮಟ್ಟದ 6ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದರು.
ಅಂತರಿಕ ಒಳ ನೋಟದಲ್ಲಿ ಕನ್ನಡವನ್ನು ಬಳಸುವ, ಉಳಿಸುವ, ಬೆಳೆಸುವ ಪ್ರಜ್ಞೆ ಮುಖ್ಯ. ನೀವು ಕನ್ನಡಿಗರನ್ನು ಉಳಿಸಿದರೆ ಆ ಜನಸಮುದಾಯ ತಾನಾಗಿಯೇ ಕನ್ನಡ ಭಾಷೆ ಉಳಿಸುತ್ತಾರೆ. ಕನ್ನಡ ಓದುವ ಕಾರಣಕ್ಕಾಗಿ ಅವರು ನಿರುದ್ಯೋಗಿಗಳಾಗಂದತೆ ವ್ಯವಸ್ಥೆ ನೋಡಿಕೊಳ್ಳಬೇಕು ಎಂದರು.
ಕನ್ನಡ ಸಾಹಿತ್ಯದಲ್ಲಿ ಚಿಂತನಶೀಲ ವೇದಿಕೆಯಾಗಿದ್ದ ಸೂಫಿಗಳು ಮತ್ತು ಸಂತರು ತಮ್ಮ ವೈಚಾರಿಕ ಚಿಂತನೆಗಳ ಮೂಲಕ ಸಮಾಜದಲ್ಲಿ ಮನುಷ್ಯ ಸಂಬಂಧಗಳ ಬೆಸೆಯುವ ಕೆಲಸ ಮಾಡಿದರು. ಕನ್ನಡ ಭಾಷೆ, ಸಾಹಿತ್ಯ ಜನತಾರತಮ್ಯ ಕೆರಳಿಸದೆ ಎಲ್ಲರೊಡನೆ ಸೌಹಾರ್ದ, ಸಮಾನತೆ ಉಂಟು ಮಾಡಿ ಮಾನವೀಯ ಪ್ರಜ್ಞೆಯನ್ನು ಜನರಲ್ಲಿ ಮೂಡಿಸು ಕೆಲಸ ಮಾಡಿದೆ ಎಂದರು.
ಸಮ್ಮೇಳನಾಧ್ಯಕ್ಷ ಪ್ರೊ.ಸಂಪಿಗೆ ತೋಂಟಾದಾರ್ಯ ಮಾತನಾಡಿ, ಸಹೃದಯ ಸಮಾಜ ನಿರ್ಮಾಣದಲ್ಲಿ ಸಾಹಿತ್ಯ, ಕೃಷಿ, ಕಲೆ, ರಂಗಭೂಮಿ, ಶಿಕ್ಷಣ, ಭಾಷೆ ಪ್ರಾಮುಖ್ಯತೆ ವಹಿಸುತ್ತವೆ. ಅಸತ್ಯದಿಂದ ಬೆಳಕಿನೆಡೆಗೆ ಸಾಗಬೇಕು. ಪರಸ್ಪರ ದ್ವೇಷ, ಅಸೂಹೆ, ಕ್ರೌರ್ಯ ಅಳಿಯಬೇಕು ಎಂದರು.
ಬೆಳಗ್ಗೆ ರಾಷ್ಟ್ರ ಧ್ವಜಾರೋಹಣವನ್ನು ತಹಶೀಲ್ದಾರ್ ಎನ್.ಎ.ಕುಂಞ ಅಹಮದ್ ಮತ್ತು ನಾಡ ದ್ವಜಾರೋಹಣವನ್ನು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಎಚ್.ಸಿ.ಶೀಲಾ ನೆರವೇರಿಸಿದರು. ಸಮ್ಮೇಳನಾಧ್ಯಕ್ಷ ಸಂಪಿಗೆ ತೋಂಟದಾರ್ಯರನ್ನು ತೆರೆದ ವಾಹನದಲ್ಲಿ ಪಟ್ಟಣದ ಪ್ರವಾಸಿ ಮಂದಿರದಿಂದ ವಿವಿಧ ಜಾನಪದ ಕಲಾ ಮೇಳಗಳ ನೃತ್ಯ, ಕುಣಿತ ಹಾಗೂ ಪೂರ್ಣ ಕುಂಭ ಕಳಶ ಸಮೇತ ವೇದಿಕೆವರೆಗೆ ಮೆರವಣಿಗೆ ಮಾಡಲಾಯಿತು. ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎನ್.ಸಿದ್ದಲಿಂಗಪ್ಪ ಅಶಯ ನುಡಿಗಳನ್ನಾಡಿದರು.
ಶಾಸಕ ಎಂ.ಟಿ.ಕೃಷ್ಣಪ್ಪ, ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ಮಾತನಾಡಿದರು. ‘ಕಲ್ಪವಿಜಯ’ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು. ವಿವಿಧ ಹಂತದಲ್ಲಿ ಮೂರು ಗೋಷ್ಠಿ ಜರುಗಿತು. ಶಾಲಾಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಎಸ್‌ಎಸ್‌ಎಲ್‌ಸಿ ಹಾಗೂ ಪಿಯು ಪರೀಕ್ಷೆಯ ಕನ್ನಡ ಭಾಷೆಯಲ್ಲಿ 125 ಅಂಕಗಳಿಸಿದ ವಿದ್ಯಾರ್ಥಿಗಳನ್ನು, ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ಐದಾರು ಲೇಖಕರ ಕೃತಿ ಬಿಡುಗಡೆ ಮಾಡಲಾಯಿತು. ಸಂಜೆ ಕಾಡಸಿದ್ದೇಶ್ವರ ಮಠದ ಶಿವಯೋಗೀಶ್ವರ ಸ್ವಾಮೀಜಿ ನೇತೃತ್ವದಲ್ಲಿ ಸಮಾರೋಪ ಸಮಾರಂಭ ನಡೆಯಿತು. ಮುನಿಯೂರು ದಾಸಾಚಾರ್ ಶಿಷ್ಯರಿಂದ ದೇವಿಮಹಾತ್ಮ ಯಕ್ಷಗಾನ ಪ್ರದರ್ಶನ ಜರುಗಿತು.
ತಾಲ್ಲೂಕು ಕಸಾಪ ಅಧ್ಯಕ್ಷ ಡಿ.ಪಿ.ರಾಜು, ಮಾಜಿ ಶಾಸಕ ಎಂ.ಡಿ.ಲಕ್ಷ್ಮಿನಾರಾಯಣ, ಜಿಲ್ಲಾ ಕಸಾಪ ಕಾರ್ಯದರ್ಶಿ ಎ.ಎನ್.ಯೋಗೀಶ್ವರಪ್ಪ, ಬೋರೇಗೌಡ, ಕೆಂಪರಾಜು, ಪರಮೇಶ್ವರ ಸ್ವಾಮಿ, ದಿನೇಶ್ ನಂ.ರಾಜುಮುನಿಯೂರು, ದೊಡ್ಡಾಘಟ್ಟ ಚಂದ್ರೇಶ್, ಎನ್.ಆರ್.ಜಯರಾಮ್, ಶ್ರೀಕಂಠೇಗೌಡ ಇದ್ದರು.
ಸಾಹಿತ್ಯಾಸಕ್ತರು ಇಲ್ಲದೆ ಸಮ್ಮೇಳನದ ವೇದಿಕೆ ಬಲ ಮತ್ತು ಎಡ ಭಾಗದಲ್ಲಿನ ಬಹುಪಾಲು ಆಸನಗಳು ಖಾಲಿ ಹೊಡೆಯುತ್ತಿದ್ದವು. ಪುಸ್ತಕ ಸೇರಿದಂತೆ ಸಮ್ಮೇಳನಕ್ಕೆ ಪೂರಕವಾದ ಮಳಿಗೆಗಳೇ ಇಲ್ಲವೆಂದು ಕನ್ನಡಾಭಿನಾಗಳು ಅಸಮಾಧಾನ ವ್ಯಕ್ತಪಡಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC