ಬೆಂಗಳೂರು: ಡಿ.ಕೆ.ಶಿವಕುಮಾರ್ ಅವರ ಶಕ್ತಿ ಮತ್ತು ಶ್ರಮವನ್ನು ಕಾಂಗ್ರೆಸ್ ಹೈಕಮಾಂಡ್ ಪರಿಗಣಿಸಿ, ಸೂಕ್ತ ಸ್ಥಾನಮಾನ ನೀಡಬೇಕು ಎಂದು ಕುಣಿಗಲ್ ಕ್ಷೇತ್ರದ ಕಾಂಗ್ರೆಸ್ ಶಾಸಕ ಹೆಚ್.ಡಿ.ರಂಗನಾಥ್ ಒತ್ತಾಯಿಸಿದರು.
ಬೆಂಗಳೂರಿನ ತಮ್ಮ ನಿವಾಸದಲ್ಲಿ ಗುರುವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರಾಜಕೀಯ ಎಂಬುದು ಕೃಷಿಯಿದ್ದಂತೆ. ಹೆಚ್ಚು ಶ್ರಮ ಹಾಕಿದಷ್ಟು ಉತ್ತಮ ರೀತಿಯಲ್ಲಿ ಬೆಳೆ ಬರುತ್ತದೆ. ಕಠಿಣ ಪರಿಶ್ರಮದ ಮೇಲೆ ನಮಗೆ ಹೆಚ್ಚು ನಂಬಿಕೆಯಿದೆ. ಇವರ ಮೇಲೆ ಭಗವಂತನ ಹಾರೈಕೆ, ಜನರ ಪ್ರೀತಿ, ವಿಶ್ವಾಸ, ಹೈಕಮಾಂಡ್ ಆಶೀರ್ವಾದವಿದೆ. ರಾಜ್ಯದಲ್ಲಿ ಕಾಂಗ್ರೆಸ್ 140 ಸ್ಥಾನಗಳನ್ನು ಗೆದ್ದಿರುವುದ ಹಿಂದೆ ಡಿ.ಕೆ.ಶಿವಕುಮಾರ್ ಅವರ ಶಕ್ತಿ ಹಾಗೂ ಶ್ರಮವಿದೆ ಎಂದು ಅನೇಕ ನಾಯಕರು ಹೇಳುತ್ತಾರೆ. ಇದನ್ನು ಪಕ್ಷದ ಹೈಕಮಾಂಡ್ ಪರಿಗಣಿಸಿ ಸೂಕ್ತ ಸ್ಥಾನಮಾನ ನೀಡಬೇಕು ಎಂದರು.
ಡಿ.ಕೆ.ಶಿವಕುಮಾರ್ ಅವರಂತೆ ಬೆಳಿಗ್ಗೆ 8ರಿಂದ ರಾತ್ರಿ 3 ಗಂಟೆಯ ತನಕ ಕೆಲಸ ಮಾಡುವ ಬೇರೆ ನಾಯಕರಿದ್ದರೆ ನನಗೆ ತಿಳಿಸಿ. ಇವರ ಶ್ರಮಕ್ಕೆ ತಕ್ಕ ಪ್ರತಿಫಲ ಇದ್ದೇ ಇರುತ್ತದೆ. ಡಿ.ಕೆ.ಶಿವಕುಮಾರ್ ಅವರು ಒಂದಲ್ಲೊಂದು ದಿನ ರಾಜ್ಯದ ಮುಖ್ಯಮಂತ್ರಿಯಾಗಬೇಕು ಎಂಬುದಾಗಿ ನಾವೆಲ್ಲರೂ ಅಪೇಕ್ಷೆ ಪಡುತ್ತೇವೆ ಎಂದು ಹೇಳಿದರು.
ಡಿ.ಕೆ.ಶಿವಕುಮಾರ್ ಅವರು ನಮಗೆಲ್ಲಾ ರಾಜಕೀಯ ಗುರುಗಳು. ಅವರ ಸಮಾಜಸೇವೆ, ಆಡಳಿತ ವೈಖರಿ, ಅಭಿವೃದ್ಧಿ ಮಾದರಿಗಳನ್ನು ನಡೆ, ನುಡಿಗಳಲ್ಲಿ ನೋಡುತ್ತಾ ಬಂದಿದ್ದೇವೆ. ಅದೇ ರೀತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳು ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿವೆ ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC