ಪಾವಗಡ: ಶತ ಶತಮಾನಗಳಿಂದ ನಾಡಿನ ಜನರಿಗೆ ಅನ್ನ ನೀಡುವ ಒಕ್ಕಲಿಗ ಸಮುದಾಯ ಸಮಾಜದ ಒಳಿತಿಗಾಗಿ ಶ್ರಮಿಸುತ್ತಿದೆ ಎಂದು ಆದಿಚುಂಚನಗಿರಿ ಸಂಸ್ಥಾನದ ಪ್ರಸನ್ನನಾಥ ಸ್ವಾಮೀಜಿ ತಿಳಿಸಿದರು.
ತಾಲ್ಲೂಕಿನ ಕೆ.ಟಿ.ಹಳ್ಳಿ ಗ್ರಾಮದಲ್ಲಿ ಶುಕ್ರವಾರ ನಡೆದ ನಾಡಪ್ರಭು ಕೆಂಪೇಗೌಡ ಜಯಂತಿ, ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಒಕ್ಕಲಿಗರ ಕುಲ ಕಸುಬು ವ್ಯವಸಾಯ. ಈ ಭಾಗದಲ್ಲಿ ಸಮುದಾಯದ ಅಭಿವೃದ್ಧಿಗಾಗಿ ನೀರಾವರಿ ಯೋಜನೆಗಳು ಅನುಷ್ಠಾನವಾಗಬೇಕು. ಜನತೆ ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹೆಚ್ಚು ಒತ್ತು ನೀಡಬೇಕು. ಸಮುದಾಯದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಆದಿಚುಂಚನಗಿರಿ ಸಂಸ್ಥೆಯಿಂದ ಮಧುಗಿರಿ, ಕೊರಟಗೆರೆ ಭಾಗದಲ್ಲಿ ಕೃಷಿ ವಿಜ್ಞಾನ ಕಾಲೇಜು ಪ್ರಾರಂಭಿಸಲು ಸಿದ್ಧತೆ ನಡೆಯುತ್ತಿದೆ ಎಂದರು.
ಶಾಸಕ ಎಚ್.ವಿ. ವೆಂಕಟೇಶ್ ಮಾತನಾಡಿ, ಒಕ್ಕಲಿಗ ಸಮಾಜ ಸಂಘಟಿತರಾಗಿ, ಸಮುದಾಯಕ್ಕೆ ಬೇಕಾದ ಸೌಕರ್ಯ ಕಲ್ಪಿಸಲಾಗುವುದು ಎಂದರು.
ಸಂಸದ ಗೋವಿಂದ ಕಾರಜೋಳ ಮಾತನಾಡಿ, ಕೆಂಪೇಗೌಡರು ಕೋಟೆ, ಪೇಟೆಗಳ ನಿರ್ಮಾಣದ ಮೂಲಕ ಎಲ್ಲಾ ವರ್ಗದ ಜನರ ಅಭಿವೃದ್ಧಿಗಾರಿ ಶ್ರಮಿಸಿದ್ದರು. ಕೆರೆ ಕಟ್ಟೆಗಳ ನಿರ್ಮಾಣ, ಮಾರುಕಟ್ಟೆಗಳ ನಿರ್ಮಾಣ ಮಾಡಿದ್ದ ಅವರು ತಮ್ಮ ಆಳ್ವಿಕೆಯ ಕಾಲದಲ್ಲಿಯೇ ಆಧುನಿಕತೆಯನ್ನು ಪರಿಚಯಿಸಿ ಇಡೀ ಪ್ರಪಂಚವನ್ನು ಆಕರ್ಷಿಸುವ ಬೆಂಗಳೂರು ನಿರ್ಮಿಸಿದ ಕೀರ್ತಿ ಅವರದ್ದು. ಕೆಂಪೇಗೌಡರ ಆದರ್ಶ, ತತ್ವಗಳನ್ನು ಎಲ್ಲರೂ ಪಾಲಿಸಬೇಕು ಎಂದರು.
ಶಿರಾ ಶಾಸಕ ಟಿ ಬಿ ಜಯಚಂದ್ರ ಮಾತನಾಡಿ, ಸರ್ಕಾರದ ಸವಲತ್ತು ಪಡೆಯುವ ಉದ್ದೇಶದಿಂದ ಸಮೀಕ್ಷೆಯಲ್ಲಿ ಜಾತಿ–ವಕ್ಕಲಿಗ ಎಂದು, ಉಪಜಾತಿ–ಕುಂಚಟಿಗ ಎಂದು ನಮೂದಿಸುವಂತೆ ಮನವಿ ಮಾಡಿದರು.
ಮಾಜಿ ಶಾಸಕ ತಿಮ್ಮರಾಯಪ್ಪ, ಶಿಕ್ಷಕ ತಿಪ್ಪೇಸ್ವಾಮಿ ಮಾತನಾಡಿದರು. ತಾಲೂಕು ಕುಂಚಿಟಿಗರ ಸಂಘದ ಅಧ್ಯಕ್ಷ ತಿಪ್ಪೇಈರಣ್ಣ, ರಾಜ್ಯ ಸಂಘದ ನಿರ್ದೇಶಕ ಹನುಮಂತರಾಯಪ್ಪ, ಎಸ್.ಆರ್. ಗೌಡ, ರಂಗೇಗೌಡ, ಹನುಮಂತೇಗೌಡ, ಎನ್.ಎ. ಈರಣ್ಣ, ನರಸಿಂಹಯ್ಯ, ತಿಮ್ಮಾರೆಡ್ಡಿ, ಟಿ. ನರಸಿಂಹಯ್ಯ, ತಿಪ್ಪೇಸ್ವಾಮಿ, ಮೆಡಿಕಲ್ ಮಂಜು, ಮಂಗಳವಾಡ ರಂಗಣ್ಣ, ಹನುಮಂತರಾಯಪ್ಪ ಸೇರಿದಂತೆ ಕೆಂಪೇಗೌಡ ಯುವಕರ ಸಂಘದ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC