ತಿಪಟೂರು: ಪ್ರತಿಯೊಂದು ಹಿಂದೂವಿನ ಮನೆಗೂ ಆರ್ ಎಸ್ ಎಸ್ ವಿಚಾರ ತಲುಪುವಂತೆ ಆಗಬೇಕು. ಈ ನಿಟ್ಟಿನಲ್ಲಿ ಸ್ವಯಂಸೇವಕರು ಕಾರ್ಯಪ್ರವೃತ್ತರಾಗಬೇಕು ಎಂದು ತಿಪಟೂರು ಜಿಲ್ಲಾಕಾರ್ಯವಾಹ ರವೀಂದ್ರ ತಗ್ಗಿನಮನೆ ತಿಳಿಸಿದರು.
ನಗರದಲ್ಲಿ ಭಾನುವಾರ ವಿಜಯದಶಮಿ ಅಂಗವಾಗಿ ನಡೆದ ಆರ್‌ಎಸ್‌ಎಸ್ ಶತಾಬಿ ವರ್ಷಾಚರಣೆ ಪಥಸಂಚಲನದಲ್ಲಿ ಮಾತನಾಡಿದ ಅವರು, ಸಮಾಜ ಯಾವುದೇ ತುರ್ತು ಸಂದರ್ಭದಲ್ಲಿ ಆರ್ ಎಸ್ ಎಸ್ ಉಪಸ್ಥಿತಿಯನ್ನು ಅಪೇಕ್ಷಿಸುತ್ತದೆ. ಆದರೆ ಸಂಘ ನಿಸ್ವಾರ್ಥ ಭಾವನೆಯಿಂದ ಮುಂಚಿತವಾಗಿಯೇ ಕಾರ್ಯಪ್ರವೃತ್ತರಾಗಿರುತ್ತಾರೆ ಎಂದರು.
ಮಂಡಲ ಮಟ್ಟದಲ್ಲಿಯೇ ಸಂಘದ ಕಾರ್ಯಕರ್ತರಿಗೆ ಸಂಸ್ಕಾರ, ಸೇವಾ ಮನೋಭಾವ, ಶಿಸ್ತು ರೂಢಿಸಿಕೊಳ್ಳಲು ದೈನಂದಿನ ಶಾಖೆ ಕಾರಣವಾಗುತ್ತಿದೆ. ಸಂಘದ ಕಾರ್ಯಕರ್ತರು ತಾವು ಇರುವ ಕಡೆ ಒಳ್ಳೆಯ ವಾತವಾರಣ ನಿರ್ಮಿಸುತ್ತಾರೆ. ದೇಶಕ್ಕೆ ಆಪತ್ತು ಬಂದಾಗ ಸೇವಕ ಸೇವೆಗೆ ನಿಲ್ಲುತ್ತಾನೆ. ಸಮಾಜದ ಸಮಸ್ಯೆಯನ್ನು ತನ್ನ ರ್ಕವ್ಯವೆಂದು ಭಾವಿಸುತ್ತಾನೆ, ಆದರೆ ಯಾವುದೇ ಗೌರವ, ಸನ್ಮಾನ ಅಪೇಕ್ಷಿಸುವುದಿಲ್ಲ. ಆರ್ ಎಸ್ ಎಸ್ ನೂರು ವರ್ಷದಲ್ಲಿ ಅನೇಕ ಸವಾಲುಗಳನ್ನು ಎದುರಿಸಿದ್ದು, ಎಂದಿಗೂ ವಿಚಲತವಾಗದೆ ತನ್ನ ಕಾರ್ಯವನ್ನು ನಿರಂತರವಾಗಿ ಮಾಡುತ್ತಾ ಬಂದಿದೆ ಎಂದು ಹೇಳಿದರು..
ಗುರುಕುಲಾನಂದಶ್ರಮದ ಇಮ್ಮಡಿ ಕರಿಬಸವದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ನಾವೆಲ್ಲ ಒಂದು ಎನ್ನುವ ಭಾವನೆ ಜಾಗೃತಗೊಳಿಸಲು ಆರ್‌ಎಸ್‌ಎಸ್ ನೂರು ವರ್ಷದಿಂದ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಪಥಸಂಚಲನ ಅಂಗವಾಗಿ ನಗರದಲ್ಲಿ ಕೇಸರಿ ಬಾವುಟ ಹಾಗೂ ರಾಜಬೀದಿಯಲ್ಲಿ ಬಣ್ಣ ಬಣ್ಣದ ಅಲಂಕಾರ, ರಂಗೋಲಿ ಹಾಕಲಾಗಿತ್ತು. ಪಥ ಸಂಚಲನದ ಉದ್ದಕ್ಕೂ ಸಾರ್ವಜನಿಕರು ಪುಷ್ಪಾರ್ಚನೆ ಹಾಗೂ ಘೋಷಣೆ ಕೂಗಿದರು. 500ಕ್ಕೂ ಹೆಚ್ಚು ಗಣವೇಷಧಾರಿಗಳು ಕಲ್ಲೇಶ್ವರ ಸ್ವಾಮಿ ದೇವಾಲಯ ಆವರಣದಿಂದ ಗುರುಕುಲಾನಂದಶ್ರಮದವರೆಗೆ ಪಥಸಂಚಲನದಲ್ಲಿ ಭಾಗಿಯಾಗಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC