ತಿಪಟೂರು: ತಿಪಟೂರು ನಗರಕ್ಕೆ ಹಾಸನ, ಅರಸೀಕೆರೆ, ಬೆಂಗಳೂರು, ಹುಳಿಯಾರು ಹಾಗೂ ತುರುವೇಕೆರೆ ಕಡೆಯಿಂದ ಪ್ರವೇಶಿಸಲು ಸಾಧ್ಯವಿದ್ದರೂ, ಈ ರಸ್ತೆಯಲ್ಲಿ ಪ್ರಯಾಣಿಸುವುದು ಮಾತ್ರ ಬಹಳ ಕಷ್ಟಕರ ಎನ್ನುವಂತಿದೆ ಈ ರಸ್ತೆಯ ಸ್ಥಿತಿ.
ಹಾಲ್ಕುರಿಕೆ ರಸ್ತೆಯ ಗೋವಿನಪುರ, ಅಣ್ಣಾಪುರದ ಅಸುಪಾಸಿನಲ್ಲಿ ರಸ್ತೆ ಗುಂಡಿಗಳು ಎದುರಾಗುತ್ತವೆ. ತುರುವೇಕೆರೆ ದಿಕ್ಕಿನಿಂದ ಬರುವ ವಾಹನಗಳಿಗೆ ರೈಲ್ವೆ ಮಾರ್ಗದ ಬಳಿ ಗುಂಡಿಗಳ ಸಾಲು ವೆಲ್ ಕಂ ಮಾಡುತ್ತವೆ. ರಾತ್ರಿಯಂತೂ ರಸ್ತೆ ಗುಂಡಿಯಲ್ಲಿ ನೀರು ನಿಂತು ಗುಂಡಿಗೆ ಬಿದ್ದು ಎದ್ದು ಹೋಗುವ ದುಸ್ಥಿತಿ ಜನರದ್ದಾಗಿದೆ.
ಬೆಂಗಳೂರು ಕಡೆಯಿಂದ ಬರುವಾಗ ಕೋಡಿ ವೃತ್ತದಿಂದಲೇ ರಸ್ತೆ ಸುಸಜ್ಜಿತವಾಗಿಲ್ಲ. ಯುಜಿಡಿ ನೀರು ಮಳೆ ನೀರಿನ ಜೊತ ಕಲೆತು ರಸ್ತೆ ಮೇಲೆ ಹರಿದು ದುರ್ವಾಸನೆ ಬೀರುತ್ತಿದೆ. ಚೆಂದನೇಹಳ್ಳಿ ಗಡಿಯಿಂದ ತಿಪಟೂರು ಹಾಸನ ರಸ್ತೆಯಲ್ಲಿ ಆಳವಾದ ಗುಂಡಿಗಳಿದ್ದು, ಹಲವು ಅಪಘಾತ ಇಲ್ಲಿ ನಡೆದಿವೆ.
ಗ್ರಾಮಾಂತರ ಪ್ರದೇಶದಲ್ಲಿ ಬೋಚಿಹಳ್ಳಿ ಮತ್ತಿಘಟ್ಟ ಜಿಲ್ಲಾ ರಸ್ತೆ, ಬಳವವೇರಲು ಹೊಸೂರು ರಸ್ತೆ, ವಿಘ್ನಸಂತೆ ಗ್ರಾಮ, ಹಾಲ್ಕುರಿಕೆ ಬೈರಾಪುರ ರಸ್ತೆ, ಹಾಲೇನಹಳ್ಳಿಯ ತಿರುವುಗಳಲ್ಲಿ ಆಳವಾದ ಗುಂಡಿಗಳಾಗಿವೆ. ಬೊಮ್ಮಾಲಾಪುರ, ನಾಗತೀಹಳ್ಳಿ- ಮುಖ್ಯರಸ್ತೆ, ಮಾರಗೊಂಡನಹಳ್ಳಿ ಬಿದರೆಗುಡಿ, ಕರೀಕೆರೆ ಕೊನೇಹಳ್ಳಿ ಸಂಪರ್ಕ ರಸ್ತೆ, ಬಿಳಿಗೆರೆ ಪಾಳ್ಯ ಕಿಬ್ಬನಹಳ್ಳಿ, ಕಲ್ಲುಶೆಟ್ಟಿಹಳ್ಳಿ ಕೊಂಡ್ಲಘಟ್ಟ ರಸ್ತೆಗಳಲ್ಲಿ ಗುಂಡಿಗಳ ಸಾಲು ನೋಡಬಹುದಾಗಿದೆ.
ಇದೇ ರಸ್ತೆಯಲ್ಲಿ ಅಧಿಕಾರಿಗಳು ದಿನನಿತ್ಯ ಪ್ರಯಾಣಿಸುತ್ತಿದ್ದಾರೆ. ಆದರೂ ಅವರಿಗೆ ಗುಂಡಿಗಳು ಕಾಣಿಸದೇ ಇರುವುದು ಅಚ್ಚರಿಯೇ ಸರಿ. ಸ್ಥಳೀಯ ಶಾಸಕರು ಸ್ವಲ್ಪ ಬಿಡುವು ಮಾಡಿಕೊಂಡು ಇನ್ನಾದರೂ ಇತ್ತ ಹೆಜ್ಜೆ ಹಾಕಿ ನೋಡಲಿ ಅನ್ನೋದು ಸಾರ್ವಜನಿಕರ ಒತ್ತಾಯವಾಗಿದೆ. ಜನರು ರಸ್ತೆಗಿಳಿಯುವ ಮುನ್ನ ಅಧಿಕಾರಿಗಳು ರಸ್ತೆ ದುರಸ್ತಿ ಪಡಿಸಲು ಮುಂದಾಗ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC



