ತುಮಕೂರು: ತುಮಕೂರಿನಲ್ಲಿ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ ವತಿಯಿಂದ ತುಮಕೂರು ನಗರದಲ್ಲಿ ಅಕ್ಟೋಬರ್ 25ರಿಂದ ನವೆಂಬರ್ 4ರವರೆಗೆ ಹಮ್ಮಿಕೊಂಡಿರುವ ಸಾಬೂನು ಮೇಳಕ್ಕೆ ಚಿಲುಮೆ ಸಮುದಾಯ ಭವನದಲ್ಲಿ ಸಿದ್ಧಗಂಗಾ ಮಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಸಿದ್ಧಲಿಂಗಮಹಾಸ್ವಾಮಿಗಳವರ ಅಮೃತ ಹಸ್ತದಿಂದ ಚಾಲನೆ ನೀಡಲಾಯಿತು.
ಪೂಜ್ಯರು ಮೈಸೂರು ಸ್ಯಾಂಡಲ್ ಸೋಪು ಮತ್ತು ಕೆಎಸ್ ಡಿಎಲ್ ಉತ್ಪನ್ನಗಳು ಗ್ರಾಹಕರ ಮನ್ನಣೆ ಗಳಿಸಿವೆ. ಯಾವ ಉತ್ಪನ್ನಗಳು ಗುಣಮಟ್ಟದಿಂದ ಕೂಡಿರುತ್ತವೆಯೋ ಅವುಗಳನ್ನು ಗ್ರಾಹಕರು ಕೊಳ್ಳುತ್ತಾರೆ ಎಂದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿತ್ವದಿಂದ ಸ್ಥಾಪಿತವಾದ ಈ ಸಂಸ್ಥೆ 100 ವರ್ಷಗಳ ಭವ್ಯ ಪರಂಪರೆಯನ್ನು ಹೊಂದಿದೆ. ಅಂದಿನಿಂದ ಇಂದಿನ ತನಕ ಸಂಸ್ಥೆಯು ಗುಣಮಟ್ಟ ಕಾಪಾಡಿಕೊಂಡು ಬಂದಿದೆ. ವಿಶೇಷತೆ ಎಂದರೆ, ವರ್ಷದಿಂದ ವರ್ಷಕ್ಕೆ ಈ ಸಂಸ್ಥೆ ಲಾಭದಾಯಕದತ್ತ ಮುನ್ನಡೆಯುತ್ತಿದೆ. ಸರ್ಕಾರಕ್ಕೆ ಡಿವಿಡೆಂಡ್ ಪಾವತಿಸಿದೆ. ಇವೆಲ್ಲವನ್ನೂ ಗಮನಿಸಿದರೆ ಗ್ರಾಹಕರು ಈ ಉತ್ಪನ್ನಗಳ ಬಗ್ಗೆ ಆಕರ್ಷಣೆ ಗೊಂಡಿದ್ದಾರೆ ಎಂಬುದನ್ನು ತಿಳಿಯಬಹುದು ಎಂದರು.
ಕೆ.ಎಸ್.ಡಿ.ಎಲ್. ಸಂಸ್ಥೆಯು ಪರೋಕ್ಷವಾಗಿ ರೈತರಿಗೂ ಸಹಕಾರಿಯಾಗಿದೆ. ಶ್ರೀಗಂಧ ಮರ ಬೆಳೆಯಲು ಪ್ರೋತ್ಸಾ ಹಿಸುವುದು, ಅವುಗಳನ್ನು ಪಡೆದು ಮೈಸೂರು ಸೋಪು ಮತ್ತು ಉತ್ಪನ್ನಗಳಿಗೆ ಬಳಸುತ್ತಾ ಬಂದಿರುವುದರಿಂದ ರೈತರಿಗೂ ಪ್ರಯೋಜನವಾಗಿದೆ ಎಂದವರು ವಿವರಿಸಿದರು.
ವಿಶ್ವದಲ್ಲಿಯೇ ಹೆಸರು ಗಳಿಸಿರುವ ಹಾಗೂ ಶತಮಾನೋತ್ಸವವನ್ನು ಪೂರೈಸಿರುವ ಕರ್ನಾಟಕ ಸರ್ಕಾರದ ಹೆಮ್ಮೆಯ ಸಂಸ್ಥೆ ಎಂಬ ಖ್ಯಾತಿಗೆ ಪಾತ್ರವಾಗಿರುವ ಕರ್ನಾಟಕ ಸೋಪ್ಸ್ & ಡಿಟರ್ಜೆಂಟ್ಸ್ ಲಿಮಿಟೆಡ್ ರಿಯಾಯಿತಿ ದರದಲ್ಲಿ ಶುದ್ಧ ನೈಸರ್ಗಿಕ ಶ್ರೀಗಂಧದೆಣ್ಣೆಯುಕ್ತ ಉತ್ಕೃಷ್ಟ ಗುಣಮಟ್ಟದ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಆಯೋಜಿಸಿದೆ. ತುಮಕೂರಿನ ಬಾರ್ ಲೈನ್ ರಸ್ತೆಯಲ್ಲಿರುವ ಚಿಲುಮೆ ಪೊಲೀಸ್ ಸಮುದಾಯ ಭವನದಲ್ಲಿ ನವೆಂಬರ್ 4 ರವರೆಗೆ ಆಯೋಜಿಸಲಾಗಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಕೋರಲಾಗಿದೆ.
ಸಮಾರಂಭದ ಮುಖ್ಯ ಅತಿಥಿಗಳಾಗಿ ಡಾ.ಎಸ್.ನಾಗಣ್ಣ, ಕೆ.ಎಸ್.ಡಿ.ಎಲ್.ನ ಎಜಿಎಂ (ಆಡಳಿತ) ಅರವಿಂದ್, ಜಾಹಿರಾತು ವಿಭಾಗದ ಎಜಿಎಂ ಆರ್.ಸುಷ್ಮಾ, ಡಿಎಸ್ಪಿ ಪರಮೇಶ್ ಮೊದಲಾದವರು ಉಪಸ್ಥಿತರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC



