ಕೊರಟಗೆರೆ: ತಾಲ್ಲೂಕಿನಲ್ಲಿ ರಾಗಿ ಕಟಾವು ಯಂತ್ರಕ್ಕೆ ಬಾಡಿಗೆ ದರ ರೈತರಿಂದ ಪ್ರತಿ ಗಂಟೆಗೆ ರೂ. 2,700/- ಗಳಿಗೆ ನಿಗದಿಪಡಿಸಿದ್ದು ಒಂದು ವೇಳೆ ಕಟಾವು ಯಂತ್ರದ ಮಾಲಿಕರು/ ಗುತ್ತಿಗೆದಾರರು ರೈತರಿಂದ ಹೆಚ್ಚಿಗೆ ಬಾಡಿಗೆ ಹಣವನ್ನು ಕೇಳಿದರೆ ಅವರ ವಿರುದ್ದ ವಿಪತ್ತು ನಿರ್ವಹಣೆ ಕಾಯ್ದೆ 2005 ರ ಪ್ರಕಾರ ಕಾನೂನು ಕ್ರಮ ಕೈಕೊಳ್ಳಲಾಗುವುದು ಎಂದು ತಹಶೀಲ್ದಾರ್ ಮಂಜುನಾಥ ಕೆ. ತಿಳಿಸಿದ್ದಾರೆ.
ತಾಲ್ಲೂಕು ಕಛೇರಿ ಸಭಾಂಗಣದಲ್ಲಿ, ರೈತರ ಮುಖಂಡರು ಹಾಗೂ ರಾಗಿ ಕಟಾವು ಯಂತ್ರಗಳ ಮಾಲೀಕರೊಂದಿಗೆ ಚರ್ಚೆ ನಡೆಸಿ, ಕೊರಟಗೆರೆ ತಾಲ್ಲೂಕಿನಲ್ಲಿ 2025–26 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರಾಗಿ ಬೆಳೆಯು 12180 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು ಕಳೆದ ವರ್ಷಕ್ಕೆ ಹೊಲಿಕೆ ಮಾಡಿದರೆ ಈ ವರ್ಷ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿದ್ದು 3000 ಹೆಕ್ಟೇರ್ ನಷ್ಟು ಹೆಚ್ಚಾಗಿ ರಾಗಿ ಬೆಳೆಯು ಬಿತ್ತನೆಯಾಗಿದ್ದು ರಾಗಿ ಬೆಳೆಯು ಕಟಾವು ಹಂತದಲ್ಲಿ ಇರುತ್ತದೆ.
ಈಗಾಗಲೇ ಕಟಾವು ಕಾರ್ಯ ಪ್ರಾರಂಭವಾಗಿದ್ದು ಬಳ್ಳಾರಿ ಜಿಲ್ಲೆಯಿಂದ ತಾಲ್ಲೂಕಿಗೆ 15–20 ಕಟಾವುಯಂತ್ರಗಳು ಬಂದಿದ್ದು ಬಹುತೇಕ ರೈತರು ರಾಗಿ ಬೆಳೆಯನ್ನು ಕಟಾವುಯಂತ್ರಗಳ ಮೂಲಕ ಕಟಾವು ಮಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ನವಂಬರ್ 11ರಂದು ಜಿಲ್ಲಾಧಿಕಾರಿಗಳವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಟಾವು ಯಂತ್ರದ ಬಾಡಿಗೆ ದರವನ್ನು ನಿಗಧಿಪಡಿಸಲಾಗಿದೆ.
ಆದ್ದರಿಂದ ಕಟಾವು ಯಂತ್ರದ ಮಾಲೀಕರು,ಗುತ್ತಿಗೆದಾರರು ನಿಗಧಿಪಡಿಸಿದ ದರವನ್ನು ರೈತ ಭಾಂದವರಿಂದ ಮಾತ್ರ ಪಡೆಯಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಸಹಾಯಕ ಕೃಷಿ ನಿರ್ದೇಶಕರಾದ ರುದ್ರಪ್ಪ ಎಂ ಆರ್ ರವರು ಮಾತನಾಡಿ, ಟ್ರ್ಯಾಕ್ಟರ್ ಚಾಲಿತ ಕಟಾವು ಯಂತ್ರಗಳಿಗೆ ರೂ. 2400ಗಳನ್ನು ನಿಗದಿ ಮಾಡಿದ್ದು ರಾಗಿ ಕಟಾವು ನಂತರ ಕಂತೆ ಮಾಡಲು ಬೇಲರ್ ಗಳನ್ನು ಬಳಸುತ್ತಿದ್ದು ಪ್ರತಿ ಕಂತೆಗೆ ರೂ, 25/- ಗಳನ್ನು ನಿಗದಿ ಮಾಡಿದ್ದು, ಮಾಲೀಕರು ನಿಗದಿಪಡಿಸಿದ ದರಕ್ಕಿಂತ ಹೆಚ್ಚಿಗೆ ಹಣ ರೈತರಿಂದ ವಸೂಲಿ ಮಾಡುತ್ತಿದ್ದರೆ, ಹತ್ತಿರದ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳಿಗೆ, ಕಂದಾಯ ಇಲಾಖೆಯ ಅಧಿಕಾರಿಗಳಿಗಾಗಲಿ ಅಥವಾ ಪೋಲಿಸ್ ಠಾಣೆಯಲ್ಲಿ ದೂರು ಸಲ್ಲಿಸಿದರೆ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಕೃಷಿ ಇಲಾಖೆಯ ಸಿಬ್ಬಂದಿಗಳಾದ ನರಸಿಂಹಮೂರ್ತಿ ನಾಗರಾಜು ವೆಂಕಟೇಶ್, ರೈತ ಮುಖಂಡರು ಹಾಗೂ ಕಟಾವು ಯಂತ್ರಗಳ ಮಾಲೀಕರು ಹಾಜರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


