ತುಮಕೂರು: ಜಿಲ್ಲೆಯಲ್ಲಿರುವ ಲಂಬಾಣಿ (ಬಂಜಾರ) ಸಮುದಾಯಕ್ಕೆ ದಶಕಗಳಿಂದಲೂ ಒಂದು ಸ್ವಂತ ಸಮುದಾಯ ಭವನದ ಅಗತ್ಯವಿತ್ತು. ಅನೇಕ ವರ್ಷಗಳ ಹೋರಾಟದ ಫಲವಾಗಿ, ತುಮಕೂರು ನಗರದ ಸರಸ್ವತಿಪುರಂನಲ್ಲಿ ಬೃಹತ್ ಮತ್ತು ಭವ್ಯವಾದ ಜಿಲ್ಲಾ ಬಂಜಾರ ಭವನ ಶನಿವಾರ ಉದ್ಘಾಟನೆಗೆ ಸಿದ್ಧಗೊಂಡಿದೆ. ಜಿಲ್ಲೆಯಲ್ಲೇ ತಮ್ಮದೇಯಾದ ಆದ ಪ್ರಾಬಲ್ಯವನ್ನು ಹೊಂದಿರುವ ಬುಡಕಟ್ಟು ಲಂಬಾಣಿ ಸಮುದಾಯ, ಸಂಸ್ಕೃತಿ, ಕಲೆ, ಪರಂಪರೆ ಮತ್ತು ಐತಿಹಾಸಿಕ ಹೆಗ್ಗಳಿಕೆಗಳನ್ನು ಗಮನಿಸಿದಾಗ, ಇಂತಹ ಭವನವು ಬಹುಕಾಲದಿಂದ ಬೇಕಾಗಿತ್ತು.
ಭಾರತದ ಶ್ರೀಮಂತ ಸಂಸ್ಕೃತಿಯಲ್ಲಿ ಬಂಜಾರ ಸಮುದಾಯವು ವಿಶಿಷ್ಟ ಸ್ಥಾನವಹಿಸಿದೆ. ಅವರ ಉಡುಗೆ–ತೊಡುಗೆ, ಹಾಡು–ನೃತ್ಯ, ಕಸೂತಿ ಕಲೆ ಹಾಗೂ ಸಂಗೀತ ಎಲ್ಲವೂ ಅನನ್ಯತೆ ಹೊಂದಿವೆ. ಪರಂಪರೆಯ ಮೌಲ್ಯಗಳನ್ನು ಕಾಪಾಡಿಕೊಂಡು ಬದುಕುತ್ತಿರುವ ಈ ಜನಾಂಗ, ಸಾಮಾಜಿಕ ಮತ್ತು ಆರ್ಥಿಕ ಹಿನ್ನಡೆಯ ನಡುವೆಯೂ ತನ್ನ ಗುರುತನ್ನು ಉಳಿಸಿಕೊಂಡಿದೆ. ಜಿಲ್ಲೆಯ ಬಹುತೇಕ ತಾಂಡಗಳಲ್ಲಿ ವಾಸವಾಗಿರುವ ಜನರು ರಾಜಕೀಯ ಮತ್ತು ಶೈಕ್ಷಣಿಕವಾಗಿಯೂ ಹಿಂದುಳಿದ ಸ್ಥಿತಿಯಲ್ಲಿ ಇದ್ದರೂ ಸಹ ಇತ್ತೀಚಿನ ದಿನಗಳಲ್ಲಿ ಸಂಘಟನೆ ಮತ್ತು ಜಾಗೃತಿಯ ಚಟುವಟಿಕೆಗಳು ವೇಗ ಪಡೆದಿವೆ.
ಸ್ವಾತಂತ್ರ್ಯ ನಂತರ 75 ವರ್ಷಗಳಾದರೂ ಜಿಲ್ಲಾ ಮಟ್ಟದಲ್ಲಿ ಸಮುದಾಯಕ್ಕೆ ಭವನ ಸ್ಥಾಪಿಸಲು ಸಾಧ್ಯವಾಗಿರಲಿಲ್ಲ. 2012–13ರಲ್ಲಿ ಕರ್ನಾಟಕ ಪ್ರದೇಶ ಬಂಜಾರ (ಲಂಬಾಣಿ) ಸೇವಾ ಸಂಘದ ಮಾರ್ಗದರ್ಶನದಲ್ಲಿ ಜಿಲ್ಲಾ ಸಂಘವನ್ನು ಸ್ಥಾಪಿಸಲಾಗಿತ್ತು. ಅದರ ಪ್ರಯತ್ನದಿಂದ ಸಿಎ ನಿವೇಶನ ದೊರೆಯಿತು. ನಂತರ 2016–17ರಲ್ಲಿ ಕರ್ನಾಟಕ ತಾಂಡ ಅಭಿವೃದ್ಧಿ ನಿಗಮದ ಮುಖಾಂತರ ರಾಜ್ಯ ಸರ್ಕಾರವು ಮೂರು ಕೋಟಿ ರೂ. ಅನುದಾನ ಮಂಜೂರು ಮಾಡಿತು. ಇದರೊಂದಿಗೆ ಭವ್ಯ ಬಂಜಾರ ಭವನದ ಕನಸು ನನಸಾಯಿತು.
ಭವನದಲ್ಲಿ ಏನೇನಿದೆ..?
ಮೂರು ಅಂತಸ್ತಿನ ಕಟ್ಟಡದಲ್ಲಿ ಒಂದು ಕಲ್ಯಾಣ ಮಂಟಪ, 13 ಕೊಠಡಿಗಳು,ಸುಸಜ್ಜಿತ ಶೌಚಾಲಯ, 200 ಜನ ಒಮ್ಮೆಲೇ ಕುಳಿತು ಊಟ ಮಾಡಲು ಭೋಜನಾಲಯ, ಹಾಗೂ ಕರ್ನಾಟಕ ತಾಂಡ ಅಭಿವೃದ್ಧಿ ನಿಗಮದ ತುಮಕೂರು ಹಾಸನ ಚಿಕ್ಕಬಳ್ಳಾಪುರ ಜಿಲ್ಲೆಗಳ ವಲಯ ಕಚೇರಿ, ಜಿಲ್ಲಾ ಬಂಜಾರ ಸಂಘದ ಕಚೇರಿಗಳನ್ನು ಹೊಂದಿದೆ, ಸುಮಾರು 3 ಕೋಟಿ ರೂಪಾಯಿ ವೆಚ್ಚದಲ್ಲಿ ಬಂಜಾರ ಭವನ ರೂಪ ಪಡೆದುಕೊಂಡಿದ್ದು ಇಲ್ಲಿನ ಅಗತ್ಯಗಳು ಹೀಗಿವೆ ಅಂಗವಿಕಲರು ಮತ್ತು ವೃದ್ಧರಿಗೆ ಅನುಕೂಲ ಆಗುವ ರೀತಿಯಲ್ಲಿ ಲಿಫ್ಟ್ ವ್ಯವಸ್ಥೆ, ಭವನದ ಮುಂಭಾಗದಲ್ಲಿ ಗಣಪತಿ ವಿಗ್ರಹ, ಜನರೇಟರ್, ಅಡುಗೆ ಮಾಡಲು ಪಾತ್ರೆ ಸಾಮಗ್ರಿಗಳು ಅಗತ್ಯವಿದೆ.
ಯಾವ ಕಾರ್ಯಕ್ರಮಕ್ಕ ಬಳಕೆ?
ಪ್ರಮುಖವಾಗಿ ಸರ್ಕಾರಿ ಕಾರ್ಯಕ್ರಮಗಳು, ನಿಗಮದ ಕಾರ್ಯಕ್ರಮಗಳು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಶಿಬಿರಗಳಿಗೆ, ಧಾರ್ಮಿಕ ಕಾರ್ಯಕ್ರಮಗಳಿಗೆ, ಬಂಜಾರ ಸಮುದಾಯದ ಕಸೂತಿ ಬಟ್ಟೆಗಳ ತಯಾರಿಕಾ ಶಿಬಿರಕ್ಕೆ, ಸಮುದಾಯದ ಕಾರ್ಯಕ್ರಮಗಳಿಗೆ ಅವಕಾಶ ಇದೆ.
ಬಂಜಾರ ಸಂಘದ ಜಿಲ್ಲಾಧ್ಯಕ್ಷ ನಾರಾಯಣ್ ನಾಯ್ಕ ಡಿ. ಮಾತನಾಡಿ, ಬಂಜಾರ ಸಮುದಾಯದ ಬಹುದಿನಗಳ ಕನಸು ನನಸಾಗಿದೆ, ಭವನದ ನಿರ್ಮಾಣಕ್ಕೆ ಶ್ರಮಿಸಿದ ನಾಯಕರಿಗೆ ಮತ್ತು ಅಧಿಕಾರಿಗಳು ಸಮುದಾಯದ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ನಿಯಮಿತ ಹಾಗೂ ತುಮಕೂರು ಜಿಲ್ಲಾ ಬಂಜಾರ ಲಂಬಾಣಿ ಸೇವಾಲಾಲ್ ಸೇವಾ ಸಂಘದ ಸಹಯೋಗದಲ್ಲಿ ಡಿಸೆಂಬರ್ 13ರಂದು ಬೆಳಿಗ್ಗೆ 11 ಗಂಟೆಗೆ ನಗರದ ಸರಸ್ವತಿಪುರಂನಲ್ಲಿ “ಜಿಲ್ಲಾ ಬಂಜಾರ ಭವನದ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮ”ವನ್ನು ಹಮ್ಮಿಕೊಳ್ಳಲಾಗಿದೆ.
ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆ ಸಚಿವ ಹಾಗೂ ಸಂಸದ ವಿ. ಸೋಮಣ್ಣ ಅವರ ಘನ ಉಪಸ್ಥಿತಿಯಲ್ಲಿ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು. ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಹೆಚ್.ಸಿ.ಮಹದೇವಪ್ಪ, ಉಪಸಭಾಪತಿ ರುದ್ರಪ್ಪ ಮಾನಪ್ಪ ಲಮಾಣಿ ಅವರ ಗೌರವ ಉಪಸ್ಥಿತಿಯಲ್ಲಿ ನಗರ ಶಾಸಕ ಜಿ.ಬಿ. ಜ್ಯೋತಿಗಣೇಶ್ ಅಧ್ಯಕ್ಷತೆ ವಹಿಸುವರು. ಜಿಲ್ಲೆಯ ವಿವಿಧ ಜನಪ್ರತಿನಿಧಿಗಳು, ಅಧಿಕಾರಿಗಳು ಭಾಗವಹಿಸುವರು.
ಜಿಲ್ಲೆಯ ಎಲ್ಲಾ ತಾಲ್ಲೂಕಿನ ಸಂಘ–ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಜನಪ್ರತಿನಿಧಿಗಳು, “ನಾಯಕ್, ಡಾವೋ, ಕಾರ್ ಭಾರಿ” ಮತ್ತು ಸಮುದಾಯ ಮುಖಂಡರು ತಮ್ಮ ತಾಂಡಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಪಾಲ್ಗೊಳ್ಳಲಿದ್ದಾರೆ.
ವರದಿ: ನಂದೀಶ್ ನಾಯ್ಕ ಪಿ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


