ತುಮಕೂರು: ತುಮಕೂರಿನ ಮರಳೂರು ದಿಣ್ಣೆ ಸರ್ಕಾರಿ ಶಾಲೆಯಲ್ಲಿ ಅಯ್ಯಪ್ಪ ಮಾಲೆ ಮತ್ತು ದೀಕ್ಷಾ ವಸ್ತ್ರ ಧರಿಸಿ ಶಾಲೆಗೆ ಬಂದಿದ್ದ ಆರನೇ ತರಗತಿಯ ಇಬ್ಬರು ವಿದ್ಯಾರ್ಥಿಗಳನ್ನು ಮುಖ್ಯಶಿಕ್ಷಕಿ ಹೊರಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಆದರೆ, ಈ ಆರೋಪವನ್ನು ಶಾಲೆಯ ಮುಖ್ಯಶಿಕ್ಷಕಿ ಭಾಗ್ಯ ಅವರು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ. ತಾವು ಮಕ್ಕಳನ್ನು ಶಾಲೆಯಿಂದ ಹೊರಕ್ಕೆ ಕಳುಹಿಸಿಲ್ಲ, ಬದಲಾಗಿ ಅವರಿಗೆ ಪ್ರತ್ಯೇಕವಾಗಿ ಕುಳಿತುಕೊಳ್ಳಲು ವ್ಯವಸ್ಥೆ ಮಾಡಿದ್ದಾಗಿ ತಿಳಿಸಿದ್ದಾರೆ. ಶಾಲೆಯಲ್ಲಿ ಮೊಟ್ಟೆ ಬೇಯಿಸುವ ವ್ಯವಸ್ಥೆ ಇರುವುದರಿಂದ ಮತ್ತು ಮಾಲೆ ಧರಿಸಿದ ವಿದ್ಯಾರ್ಥಿಗಳ ಧಾರ್ಮಿಕ ನಿಯಮಗಳಿಗೆ ಅಡ್ಡಿಯಾಗಬಾರದು ಎಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿದ್ದಾಗಿ ಅವರು ಸಮರ್ಥಿಸಿಕೊಂಡಿದ್ದಾರೆ. ಅಲ್ಲದೆ, ಸಮವಸ್ತ್ರ ನಿಯಮಗಳ ಬಗ್ಗೆ ಬಿಇಒ ಅವರ ಸೂಚನೆಯನ್ನು ಮಕ್ಕಳಿಗೆ ವಿವರಿಸಿದ್ದೇನೆ ಎಂದು ಅವರು ಹೇಳಿದ್ದಾರೆ.
ಈ ಘಟನೆಯಿಂದ ಆಕ್ರೋಶಗೊಂಡ ಹಿಂದೂ ಹಿತರಕ್ಷಣಾ ವೇದಿಕೆಯ ಮುಖಂಡರು, ಮಕ್ಕಳ ಧಾರ್ಮಿಕ ಶ್ರದ್ಧೆಗೆ ಧಕ್ಕೆ ತರಲಾಗಿದೆ ಎಂದು ಆರೋಪಿಸಿ ಡಿಡಿಪಿಐಗೆ ದೂರು ನೀಡಿದ್ದಾರೆ. ಈ ಹಿಂದೆ ಚಿಕ್ಕಮಗಳೂರಿನ ಕಾಲೇಜೊಂದರಲ್ಲೂ ಇಂತಹದ್ದೇ ಘಟನೆ ನಡೆದಿದ್ದು, ಈಗ ತುಮಕೂರಿನಲ್ಲೂ ಮರುಕಳಿಸಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಸದ್ಯ ಶಿಕ್ಷಣ ಇಲಾಖೆಯ ತನಿಖೆಯಿಂದ ಸತ್ಯಾಸತ್ಯತೆ ಹೊರಬರಬೇಕಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


