ಹುಳಿಯಾರು: ಹುಳಿಯಾರು ಪಟ್ಟಣ ಪಂಚಾಯಿತಿಯಿಂದ ಮೇಲನಹಳ್ಳಿ ಗ್ರಾಮದ ಬಳಿ ನಿರ್ಮಿಸಲು ಉದ್ದೇಶಿಸಿರುವ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಸ್ಥಳೀಯ ಗ್ರಾಮಸ್ಥರು ಶನಿವಾರ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಸ್ಥಳ ಪರಿಶೀಲನೆಗಾಗಿ ಆಗಮಿಸಿದ್ದ ತಹಶೀಲ್ದಾರ್ ಎಂ. ಮಮತಾ ಅವರನ್ನು ತಡೆದ ಗ್ರಾಮಸ್ಥರು, ಯಾವುದೇ ಕಾರಣಕ್ಕೂ ಇಲ್ಲಿ ಘಟಕ ಸ್ಥಾಪನೆಗೆ ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದರು.
ಗ್ರಾಮಸ್ಥರ ಪ್ರಕಾರ, ಉದ್ದೇಶಿತ ಘಟಕವು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿದ್ದು, ಇದರಿಂದ ಜನ-ಜಾನುವಾರುಗಳಿಗೆ ಹಾಗೂ ವನ್ಯಜೀವಿಗಳಿಗೆ ತೊಂದರೆಯಾಗಲಿದೆ. ಈ ಪ್ರದೇಶದಲ್ಲಿ ಪುರಾತನ ಕಣಿವೆ ಭೂತನ ದೇಗುಲ ಹಾಗೂ ಕಲ್ಯಾಣಿಯಿದ್ದು, ಮಳೆಗಾಲದಲ್ಲಿ ತ್ಯಾಜ್ಯದ ಕಲುಷಿತ ನೀರು ಕಲ್ಯಾಣಿ ಸೇರುವುದರಿಂದ ಧಾರ್ಮಿಕ ಭಾವನೆಗೆ ಧಕ್ಕೆ ಬರುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. ಅಲ್ಲದೆ, ಪಟ್ಟಣದಿಂದ 25 ಕಿ.ಮೀ ದೂರದಲ್ಲಿ ಘಟಕ ಸ್ಥಾಪಿಸುವುದು ಸಾಗಾಣಿಕೆ ವೆಚ್ಚದ ದೃಷ್ಟಿಯಿಂದಲೂ ಸಮಂಜಸವಲ್ಲ ಎಂದು ವಾದಿಸಿದರು.
ನೂರಾರು ಮಹಿಳೆಯರು ಸೇರಿದಂತೆ ಗ್ರಾಮಸ್ಥರು ಒಕ್ಕೊರಲಿನಿಂದ ಪ್ರತಿಭಟಿಸಿದ ಹಿನ್ನೆಲೆಯಲ್ಲಿ, ತಹಶೀಲ್ದಾರ್ ಗ್ರಾಮಸ್ಥರ ಮನವೊಲಿಸಿ ಅಂತಿಮವಾಗಿ ಸ್ಥಳ ಪರಿಶೀಲನೆ ನಡೆಸಿದರು. ಕಂದಾಯ ಹಾಗೂ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಪಟ್ಟಣ ಪಂಚಾಯಿತಿ ಮುಂದೆ ಧರಣಿ ನಡೆಸುತ್ತಿದ್ದ ಪ್ರತಿಭಟನಾಕಾರರನ್ನೂ ಭೇಟಿ ಮಾಡಿದ ತಹಶೀಲ್ದಾರ್, ಶೀಘ್ರವೇ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


