ಕೊರಟಗೆರೆ : ಪಟ್ಟಣದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಅದ್ದೂರಿ ಹಾಗೂ ವೈಭವೋಪೇತ ಶ್ರೀನಿವಾಸ ಕಲ್ಯಾಣೋತ್ಸವವನ್ನು ಹಮ್ಮಿಕೊಳ್ಳಲಾಗಿದ್ದು, ಇದರಿಂದ ಕೊರಟಗೆರೆ ಧಾರ್ಮಿಕ–ಸಾಂಸ್ಕೃತಿಕ ಚಟುವಟಿಕೆಗಳ ನೂತನ ಅಧ್ಯಾಯಕ್ಕೆ ಸಾಕ್ಷಿಯಾಗಲಿದೆ ಎಂದು ಕನ್ನಿಕಾ ವಿದ್ಯಾಪೀಠ ಶಾಲೆಯ ಅಧ್ಯಕ್ಷ ಎಂ.ಜಿ. ಸುಧೀರ್ ಹೇಳಿದರು.
ಪಟ್ಟಣದ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕನ್ನಿಕಾ ವಿದ್ಯಾಪೀಠ ಶಾಲೆಯ ಆಡಳಿತ ಮಂಡಳಿಯ ಸಹಯೋಗದೊಂದಿಗೆ ಹಾಗೂ ಬೆಂಗಳೂರು ಶ್ರೀವಾರಿ ಫೌಂಡೇಶನ್ ನ ಆಶ್ರಯದಲ್ಲಿ, ಫೌಂಡೇಶನ್ ಅಧ್ಯಕ್ಷ ಎಸ್. ವೆಂಕಟೇಶಮೂರ್ತಿ ಅವರ ಸಾರಥ್ಯದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮವನ್ನು ಭಕ್ತಿಭಾವದಿಂದ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ತಿರುಪತಿಯಿಂದ ಆಗಮಿಸುವ ವಿಶೇಷ ಆಗಮಿಕ ವೃಂದದ ನೇತೃತ್ವದಲ್ಲಿ ಧಾರ್ಮಿಕ ವಿಧಿ–ವಿಧಾನಗಳೊಂದಿಗೆ ಕಲ್ಯಾಣೋತ್ಸವವನ್ನು ವೈಭವದಿಂದ ನೆರವೇರಿಸಲಾಗುವುದು ಎಂದರು.
ಡಿ.25ರ ಗುರುವಾರ ಸಂಜೆ 4 ಗಂಟೆಗೆ ಪಟ್ಟಣದ ಎಂಜಿ ಪ್ಯಾಲೇಸ್ ನಲ್ಲಿ ಕಲ್ಯಾಣೋತ್ಸವ ನಡೆಯಲಿದ್ದು, ಶ್ರೀ ವೆಂಕಟೇಶ್ವರ ದೇವರಿಗೆ ಶ್ರೀದೇವಿ ಮತ್ತು ಭೂದೇವಿ ಸಮೇತ ಮಂಗಳಕರವಾಗಿ ಕಲ್ಯಾಣೋತ್ಸವ ನೆರವೇರಿಸಲಾಗುತ್ತದೆ. ರಾತ್ರಿ 9 ಗಂಟೆಯವರೆಗೆ ತಿರುಪತಿಯ ವೈಕುಂಠದ ಮಾದರಿಯಲ್ಲಿ ವಿಶೇಷವಾಗಿ ಅಲಂಕೃತ ವೇದಿಕೆಯಲ್ಲಿ ಧಾರ್ಮಿಕ ವಿಧಿ–ವಿಧಾನಗಳು ನಡೆಯಲಿದ್ದು, ಭಕ್ತರಿಗೆ ಅಪೂರ್ವ ಆಧ್ಯಾತ್ಮಿಕ ಅನುಭವ ದೊರೆಯಲಿದೆ ಎಂದು ಮಾಹಿತಿ ನೀಡಿದರು.
ಶಾಲೆಯ ಉಪಾಧ್ಯಕ್ಷ ಕೆ.ಎಸ್. ಶ್ರೀನಿವಾಸ್, ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರತಿಯೊಬ್ಬ ಭಕ್ತರಿಗೂ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದೆ. ವಿಶೇಷವಾಗಿ ಶ್ರೀ ವೆಂಕಟೇಶ ಕಲ್ಯಾಣೋತ್ಸವದ ಲಾಡು ಪ್ರಸಾದವನ್ನು ವಿತರಿಸಲಾಗುತ್ತದೆ. ಡಿ.25ರಂದು ಸಾರ್ವಜನಿಕ ರಜೆ ಇರುವುದರಿಂದ ಹಾಗೂ ಈ ತಿಂಗಳ ಕೊನೆಯಲ್ಲಿ ವೈಕುಂಠ ಏಕಾದಶಿ ಇರುವ ಹಿನ್ನೆಲೆ ಶ್ರೀನಿವಾಸ ಕಲ್ಯಾಣೋತ್ಸವವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಶಾಲೆಯ ಕಾರ್ಯದರ್ಶಿ ಕೆಎಸ್ ವಿ ರಘು ಮಾತನಾಡಿ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಾಸವಿ ಪೀಠಂನ ಸಚ್ಚಿದಾನಂದ ಸರಸ್ವತಿ,ಸಿದ್ದರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಎಲೆರಾಂಪುರ ಕುಂಚಿಟಿಗ ಮಹಾ ಸಂಸ್ಥಾನ ಮಠದ ಡಾ.ಹನುಮಂತನಾಥ ಸ್ವಾಮೀಜಿ, ಗೃಹ ಸಚಿವ ಡಾ.ಜಿ.ಪರಮೇಶ್ವರ್, ಮಾಜಿ ಶಾಸಕ ಪಿ.ಆರ್.ಸುಧಾಕರ್ ಲಾಲ್, ಬಿಜೆಪಿ ಮುಖಂಡ ಅನಿಲ್ ಕುಮಾರ್ ಸೇರಿದಂತೆ ಇತರರು ಪಾಲ್ಗೊಳ್ಳುವರು ಎಂದರು.
ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ವಿಶೇಷತೆಗಳ ಬಗ್ಗೆ ನಿರ್ದೇಶಕರಾದ ಎಂ.ಜಿ.ಬದ್ರಿಪ್ರಸಾದ್ ಚಿನ್ನ ವೆಂಕಟ ಶೆಟ್ಟಿ, ಕೆ.ಆರ್.ನಂಜುಂಡ ಶೆಟ್ಟಿ, ಎಚ್.ಸಿ. ನಾಗೇಂದ್ರ ಬಾಬು ಹಾಗೂ ಕೆ.ಎಸ್. ಪ್ರಶಾಂತ್ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಪಟ್ಟಣದ ಬಸ್ ನಿಲ್ದಾಣದಿಂದ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಭಕ್ತರ ಅನುಕೂಲಕ್ಕಾಗಿ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಆಯೋಜಕರು ತಿಳಿಸಿದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


