ತುರುವೇಕೆರೆ: ತಾಲೂಕಿನ ಹರೆಮಲ್ಲೇನೆಹಳ್ಳಿ ಗ್ರಾಮದ ಸುಜಾತ ಎಂಬ 40 ವರ್ಷದ ಮಹಿಳೆ ಜಾನುವಾರು ಮೇಯಿಸಲು ಹೋದಾಗ ಭಾನುವಾರ ಸಂಜೆ 4:30 ರಿಂದ 5:30ರ ಸಮಯದಲ್ಲಿ ಮಹಿಳೆ ಮೇಲೆ ಚಿರತೆ ದಾಳಿ ಮಾಡಿ ಮಹಿಳೆ ಸಾವನ್ನಪ್ಪಿರುವ ಘಟನೆ ತಾಲೂಕಿನಲ್ಲಿ ನಡೆದಿದೆ.
ವಿಷಯ ತಿಳಿದ ತಹಶೀಲ್ದಾರ್ ಅಹಮದ್ ಸಿಬ್ಬಂದಿಗಳೊಂದಿಗೆ ತೆರಳಿ ಸ್ಥಳದಲ್ಲೇ ರಾತ್ರಿ 12 ಗಂಟೆಯವರೆಗೆ ಮೊಕ್ಕಂ ಹೂಡಿದ್ದು, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ. ಇನ್ನು ಸೋಮವಾರ ಬೆಳಿಗ್ಗೆ ಚಿರತೆ ದಾಳಿಯಿಂದಾಗಿ ಸುಜಾತ ಎಂಬ 40 ವರ್ಷದ ಮಹಿಳೆ ಸಾವನ್ನಪ್ಪಿರುವ ಸುದ್ದಿ ತಿಳಿಯುತ್ತಿದ್ದಂತೆ ಪಟ್ಟಣಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿದ್ದಾರೆ.
ಚಿರತೆ ದಾಳಿಯಿಂದ ಸಾವಿಗೀಡಾದ ಮಹಿಳೆಯನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದು, ಜಿಲ್ಲಾಧಿಕಾರಿ ಹಾಗೂ ತಾಲ್ಲೂಕು ಶಾಸಕರಾದ ಎಂ.ಟಿ.ಕೃಷ್ಣಪ್ಪ ಅವರು ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ದು, ಸ್ಥಳದಲ್ಲಿ ಜಿಲ್ಲಾಧಿಕಾರಿ ಅರಣ್ಯ ಅಧಿಕಾರಿಗಳಿಗೆ ಚಿರತೆ ಹಿಡಿಯಲು ಖಡಕ್ ಸೂಚನೆ ನೀಡಿದ್ದಾರೆ.
ಚಿರತೆ ದಾಳಿಯಿಂದ ಸಾವಿಗೀಡಾದ ಮಹಿಳೆಯ ಕುಟುಂಬಕ್ಕೆ ಭದ್ರಾ ಫೌಂಡೇಶನ್ ವತಿಯಿಂದ 20 ಲಕ್ಷ ಪರಿಹಾರ ಘೋಷಿಸಿದ್ದು ಸ್ಥಳದಲ್ಲಿಯೇ ಶಾಸಕ ಎಂ.ಟಿ.ಕೃಷ್ಣಪ್ಪ 5 ಲಕ್ಷ ರೂ. ಪರಿಹಾರ ವಿತರಿಸಿದರು, ಬಾಕಿ ಉಳಿದ ಪರಿಹಾರದ ಹಣವನ್ನು ಶೀಘ್ರವೇ ಬಿಡುಗಡೆಗೊಳಿಸಲಾಗುವುದು ಎಂದರು.
ಜೊತೆಗೆ ತಾಲೂಕಿನಲ್ಲಿ ಚಿರತೆಯಿಂದ ಯಾವುದೇ ಅನಾಹುತ ನಡೆಯದಂತೆ ಮುಂಜಾಗೃತ ಕ್ರಮವಾಗಿ ಸಾರ್ವಜನಿಕರಿಗೆ ಮಾಹಿತಿ ನೀಡಿ ಜಾಗೃತರಾಗಿಸಿ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಇದರ ಜೊತೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮಕ್ಕಳು ಶಾಲೆಗೆ ತೆರಳುವ ವೇಳೆ ಒಬ್ಬಂಟಿಯಾಗಿ ತೆರಳದ ಹಾಗೆ ಪೋಷಕರಿಗೆ ಜಾಗೃತಿ ಮೂಡಿಸಬೇಕು ಎಂದು ಸೂಚಿಸಿದರು. ಜೊತೆಗೆ ಈಗಾಗಲೇ ಸ್ಥಳದಲ್ಲಿಯೇ ಡಿ ಆರ್.ಎಫ್.ಓ. ಗೌರಿಶಂಕರ್ ಮಾರ್ಗದರ್ಶನದಲ್ಲಿ ಮತ್ತು ಆರ್.ಎಫ್.ಒ. ವಿಜಯಕುಮಾರ್ ನೇತೃತ್ವದಲ್ಲಿ ಸುಮಾರು 7 ರಿಂದ 8 ಅರಣ್ಯ ಇಲಾಖೆ ಸಿಬ್ಬಂದಿಗಳೊಂದಿಗೆ ಸ್ಥಳದಲ್ಲಿಯೇ ಬಿಡು ಬಿಟ್ಟಿರುವ ತಂಡ ದಾಳಿ ಮಾಡಿರುವ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದು, ಇನ್ನೂ ಒಂದು ಚಿರತೆ ಇರುವ ಮಾಹಿತಿ ಲಭ್ಯವಾಗಿದ್ದು, ಚಿರತೆಗಾಗಿ ಶೋಧ ಕಾರ್ಯ ನಡೆಯುತ್ತಿದ್ದು ನಾಳೆಯೂ ಕೂಂಬಿಂಗ್ ಕಾರ್ಯ ಜೊತೆಗೆ ಅರವಳಿಕೆ ಮದ್ದು ನೀಡುವ ತಜ್ಞರು ಕೂಡ ಆಗಮಿಸಿ ನಾಳೆಯೂ ಚಿರತೆಗಾಗಿ ಶೋಧ ನಡೆಯಲಿದೆ ಎಂದು ಅರಣ್ಯ ಇಲಾಖೆಯಿಂದ ತಿಳಿದು ಬಂದಿದೆ
ವರದಿ: ಮಂಜುನಾಥ್ ಕೆ.ಎ., ತುರುವೇಕೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


