ತುಮಕೂರು: ಕೆಪಿಎಸ್ ಮ್ಯಾಗ್ನೆಟ್ ಹೆಸರಿನಲ್ಲಿ ತುಮಕೂರು ತಾಲೂಕಿನ ಡಿ ಕೊರಟಗೆರೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಚ್ಚುತ್ತಿರುವುದನ್ನು ವಿರೋಧಿಸಿ, ಶಾಲೆ ಉಳಿಸಲು ಆಗ್ರಹಿಸಿ ವಿದ್ಯಾರ್ಥಿಗಳು ಹಾಗೂ ಪೋಷಕರಿಂದ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಎಐಡಿಎಸ್ ಓ ಜಿಲ್ಲಾ ಜಿಲ್ಲಾ ಕಾರ್ಯದರ್ಶಿಗಳಾದ ಲಕ್ಕಪ್ಪ ಮಾತನಾಡಿ, ಬರಿ ಗ್ರಾಮ ಪಂಚಾಯಿತಿಗೊಂದು ಕೆಪಿಎಸ್ ಮ್ಯಾಗ್ನೆಟ್ ಶಾಲೆ ಮಾಡಿ ಶಾಲೆಯನ್ನು ಮುಚ್ಚುತ್ತಿರುವ ಸರ್ಕಾರವು ಗ್ರಾಮದ ಬಡ ರೈತ–ಕಾರ್ಮಿಕರ ಮಕ್ಕಳಿಗೆ ಅನ್ಯಾಯ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಮುಂದುವರೆದು ಮಾತನಾಡುತ್ತಾ, ಬಸವೇಗೌಡನಪಾಳ್ಯ, ಬಿದರಕಟ್ಟೆ, ಕಳ್ಳಿಪಾಳ್ಯ, ಬೊಮ್ಮನಹಳ್ಳಿ,, ಚಿಕ್ಕ ಕೊರಟಗೆರೆ ಮತ್ತು ಡಿ ಕೊರಟಗೆರೆ ಗ್ರಾಮಗಳ ಸರ್ಕಾರಿ ಶಾಲೆಗಳನ್ನು ಮುಚ್ಚಿ ಮಸ್ಕಲ್ ಗ್ರಾಮ ಪಂಚಾಯತಿಯ ಮ್ಯಾಗ್ನೆಟ್ ಶಾಲೆಗೆ ಸೇರಿಸಿ ಮಕ್ಕಳನ್ನು ದೂರದ ಶಾಲೆಗೆ ಕಳುಹಿಸಲಾಗುತ್ತದೆ. ಉಚಿತ ಬಸ್ ಸೌಲಭ್ಯ ಹೊರೆಯನ್ನು ಎಸ್ ಡಿಎಂಸಿ ಗೆ ವಹಿಸಿ, ಮ್ಯಾಗ್ನೆಟ್ ಶಾಲೆಯ ನಿರ್ವಹಣೆ ಹೊರಗುತ್ತಿಗೆ ನೀಡಲಾಗುತ್ತಿದೆ. ಇದು ಕ್ರಮೇಣವಾಗಿ ಸರ್ಕಾರಿ ಶಾಲೆಗಳನ್ನು ಖಾಸಗೀಕರಣಗೊಳಿಸಿ, ಬಡ ಮಕ್ಕಳನ್ನು ಶಾಶ್ವತವಾಗಿ ದೂರ ತಳ್ಳುವ ಹುನ್ನಾರ ಮಾಡುತ್ತಿರುವ ಸರ್ಕಾರದ ನಡೆಯನ್ನು ಖಂಡಿಸಿದರು.
ಗ್ರಾಮಸ್ಥರಾದ ನಾಗರಾಜು ಅವರು ಮಾತನಾಡಿ, ಸದನದಲ್ಲಿ ಶಿಕ್ಷಣ ಸಚಿವರು ಯಾವುದೇ ಒಂದು ಹಳ್ಳಿಯ ಹಾಗೂ ಸಣ್ಣ ಹಳ್ಳಿಯ ಶಾಲೆ ಸಹ ಮುಚ್ಚುವುದಿಲ್ಲ ಅಂತ ಹೇಳಿದ್ದರು ಈಗ ಅವರು ಆ ಮಾತಿನಂತೆ ನಡೆದುಕೊಳ್ಳಬೇಕು, ಶಾಲೆಗಳನ್ನು ಮುಚ್ಚಿದರೆ ನಮ್ಮ ಮಕ್ಕಳನ್ನು ದೂರದ ಊರಿಗೆ ಕಳುಹಿಸಲು ತೊಂದರೆಯಾಗುತ್ತದೆ. ಮಳೆಗಾಲದಲ್ಲಿ ಜನಸಾಮಾನ್ಯರೇ ಓಡಾಡಲು ಕಷ್ಟವಾಗುತ್ತದೆ ಇಂತಹ ಪರಿಸ್ಥಿತಿಯಲ್ಲಿ ಮಕ್ಕಳನ್ನು ಕಳಿಸುವುದು ಸಾಧ್ಯವಾಗದ ಮಾತು, ಒಂದು ವೇಳೆ ನೀವು ಶಾಲೆಯನ್ನು ಮುಚ್ಚಲು ಬಂದದ್ದೇ ಆದರೆ ನಾವು ಪ್ರತಿಭಟನೆಯ ಮೂಲಕ ನಮ್ಮೂರಿನ ಶಾಲೆಗಳನ್ನು ಉಳಿಸಿಕೊಳ್ಳುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾವು ಬೆಳಗ್ಗೆಯಿಂದ ಸಂಜೆವರೆಗೆ ದುಡಿಯುವ ಜನ, ನಮ್ಮ ಚಿಕ್ಕಮಕ್ಕಳನ್ನು 2 ಕಿಲೊಮೀಟರ್ ದೂರ ಇರುವ ಮಸ್ಕಲ್ ಶಾಲೆಗೆ ಕಳುಹಿಸಲು ಖಂಡಿತಾ ಸಾಧ್ಯವಿಲ್ಲ. ಅಲ್ಲದೆ ಹೆಣ್ಣು ಮಕ್ಕಳನ್ನು ದೂರದ ಊರಿಗೆ ಕಳುಹಿಸುವುದು ಕಷ್ಟ , ಈ ಯೋಜನೆ ಖಂಡಿತವಾಗಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಕುತ್ತು ತರುತ್ತದೆ ಎಂದು ಗ್ರಾಮಸ್ಥರು ತಮ್ಮ ಅಭಿಪ್ರಾಯವನ್ನ ವ್ಯಕ್ತಪಡಿಸಿದರು.
ಪ್ರತಿಭಟನೆಯ ನಂತರ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ರಚಿಸಲಾಯಿತು. ಪ್ರತಿಭಟನೆಯಲ್ಲಿ ಎಐಡಿಎಸ್ ಓ ತುಮಕೂರು ಜಿಲ್ಲಾ ಕಾರ್ಯದರ್ಶಿ ಮಂಡಳಿಯ ಸದಸ್ಯರಾದ ಭರತ್ ಎಸ್. ಹಾಗೂ ಗ್ರಾಮದ ವಿದ್ಯಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


