ಜೊಮ್ಯಾಟೋ ಡೆಲಿವರಿ ಏಜೆಂಟ್ ಮತ್ತು ಗ್ರಾಹಕನ ನಡುವಿನ ಕಿತ್ತಾಟದ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಏನಿದು ಘಟನೆ? ಅಂಕುರ್ ಠಾಕೂರ್ ಎಂಬ ಜೊಮ್ಯಾಟೋ ಡೆಲಿವರಿ ಬಾಯ್ ರಾತ್ರಿ ಸುಮಾರು 2:30 ಗಂಟೆಗೆ ಆರ್ಡರ್ ಒಂದನ್ನು ತಲುಪಿಸಲು ಹೋಗಿದ್ದರು. ಆ ಸಮಯದಲ್ಲಿ ಗ್ರಾಹಕರಿಗೆ ಕೆಳಗೆ ಬಂದು ಪಾರ್ಸೆಲ್ ಪಡೆದುಕೊಳ್ಳುವಂತೆ ವಿನಂತಿಸಿದ್ದಾರೆ. ಆದರೆ ಗ್ರಾಹಕರು ಕೆಳಗೆ ಬರಲು ನಿರಾಕರಿಸಿ, ಮನೆ ಬಾಗಿಲಿಗೇ ಬಂದು ನೀಡುವಂತೆ ಪಟ್ಟು ಹಿಡಿದಿದ್ದಾರೆ.
ಡೆಲಿವರಿ ಬಾಯ್ ವಾದವೇನು? “ರಾತ್ರಿ 2:30 ಆಗಿದೆ, ನಾನು ಗಾಡಿಯನ್ನು ಕೆಳಗೆ ಬಿಟ್ಟು ಮೇಲೆ ಬಂದರೆ ಯಾರಾದರೂ ಬೈಕ್ ಕದಿಯುವ ಭಯವಿದೆ. ಅಷ್ಟೇ ಅಲ್ಲದೆ, ಇಷ್ಟು ಚಳಿಯಲ್ಲಿ ನಾವು ದೂರದ ಹಾದಿ ಕ್ರಮಿಸಿ ಬರುತ್ತೇವೆ, ಗ್ರಾಹಕರು ಸ್ವಲ್ಪ ಸಹಕರಿಸಬೇಕು” ಎಂಬುದು ಅಂಕುರ್ ಅವರ ವಾದವಾಗಿತ್ತು. ಆದರೆ ಗ್ರಾಹಕರು, “ನಾವು ಹಣ ಪಾವತಿಸಿರುವುದು ಮನೆ ಬಾಗಿಲಿಗೆ ತಲುಪಿಸಲು, ಅಲ್ಲಿಗೇ ಬನ್ನಿ ಇಲ್ಲದಿದ್ದರೆ ಆರ್ಡರ್ ಕ್ಯಾನ್ಸಲ್ ಮಾಡಿ” ಎಂದು ಗದರಿಸಿದ್ದಾರೆ ಎನ್ನಲಾಗಿದೆ.
ಮುಂದೇನಾಯ್ತು? ಗ್ರಾಹಕರ ಮಾತಿನಿಂದ ಬೇಸತ್ತ ಅಂಕುರ್, ಆರ್ಡರ್ ಅನ್ನು ಕ್ಯಾನ್ಸಲ್ ಮಾಡಿ, ಆ ಆಹಾರವನ್ನು ತಾವೇ ತಿನ್ನಲು ನಿರ್ಧರಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಅವರು, “ನಾನು ಆರ್ಡರ್ ಕ್ಯಾನ್ಸಲ್ ಮಾಡಿದ್ದೇನೆ, ಈಗ ಇಲ್ಲೇ ಕುಳಿತು ಇದನ್ನು ತಿನ್ನುತ್ತಿದ್ದೇನೆ” ಎಂದು ಹೇಳುತ್ತಾ ಗುಲಾಬ್ ಜಾಮೂನ್ ಮತ್ತು ಬಿರಿಯಾನಿ ಸವಿಯುವುದನ್ನು ಕಾಣಬಹುದು.
ಈ ವಿಡಿಯೋ ಸುಮಾರು 1.2 ಮಿಲಿಯನ್ ವೀಕ್ಷಣೆ ಪಡೆದಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೆಲವರು, “ಗ್ರಾಹಕರು ಪ್ರೀಮಿಯಂ ದರ ಮತ್ತು ಡೆಲಿವರಿ ಚಾರ್ಜ್ ನೀಡುವುದೇ ಮನೆ ಬಾಗಿಲಿಗೆ ಸೇವೆ ಸಿಗಲಿ ಎಂದು, ಹಾಗಾಗಿ ಡೆಲಿವರಿ ಬಾಯ್ ಮನೆಗೇ ಹೋಗಬೇಕಿತ್ತು” ಎಂದು ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಕೆಲವರು, “ರಾತ್ರಿ ಸಮಯದಲ್ಲಿ ಸುರಕ್ಷತೆಯ ದೃಷ್ಟಿಯಿಂದ ಡೆಲಿವರಿ ಬಾಯ್ ಹೇಳುವುದು ಸರಿ ಇದೆ, ಗ್ರಾಹಕರು ಮಾನವೀಯತೆ ತೋರಬೇಕಿತ್ತು” ಎಂದು ಬೆಂಬಲಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


