ತುಮಕೂರು: ರಾಜ್ಯದಲ್ಲಿ ಕೆಪಿಎಸ್ — ಮ್ಯಾಗ್ನೆಟ್ ಹೆಸರಿನಲ್ಲಿ ಸಿರಾ ತಾಲೂಕಿನ ಸೀಬಿಅಗ್ರಹಾರ ಗ್ರಾಮ ಪಂಚಾಯಿತಿ ಮತ್ತು ಕುಂಟೇಗೌಡನಹಳ್ಳಿಯ ಸರ್ಕಾರಿ ಶಾಲೆ ಉಳಿಸಲು ಊರಿನ ವಿದ್ಯಾರ್ಥಿಗಳು , ಪೋಷಕರು ಎಐಡಿಎಸ್ ಓ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನ ಉದ್ದೇಶಿಸಿ ಜಿಲ್ಲಾ ಕಾರ್ಯದರ್ಶಿ ಲಕ್ಕಪ್ಪ ಮಾತನಾಡಿ, ಊರಿನ ಶಾಲೆ ಮುಚ್ಚಲು ಮುಂದಾಗಿರುವ ರಾಜ್ಯ ಸರ್ಕಾರ ಹಂತ ಹಂತವಾಗಿ ಶಿಕ್ಷಣವನ್ನ ಸಂಪೂರ್ಣ ರೈತ ಕಾರ್ಮಿಕರಿಂದ ಕಿತ್ತುಕೊಂಡು ಶ್ರೀಮಂತರ ಸ್ವತ್ತಾಗಿಸುತ್ತಿದೆ. ಈ ಊರಿನ ಎಲ್ಲಾ ಜನರು ಕೂಡ ಸರ್ಕಾರಿ ಶಾಲೆಗಳ ಮೇಲೆ ಸಂಪೂರ್ಣವಾಗಿ ಅವಲಂಬಿತರಾಗಿದ್ದಾರೆ. ಏಶಿಯನ್ ಡೆವಲಪ್ಮೆಂಟ್ ಬ್ಯಾಂಕ್ ಇಂದ 2,500 ಕೋಟಿ ಸಾಲವನ್ನು ತೆಗೆದುಕೊಳ್ಳುವ ಮೂಲಕ ಸರ್ಕಾರಿ ಶಿಕ್ಷಣ ಸಂಸ್ಥೆಗಳ ಸಂಖ್ಯೆಯನ್ನು ಇಳಿಮುಖಗೊಳಿಸುತ್ತಾ, ಬಡ ಜನಗಳ ಹೊರೆಯನ್ನು ಇನ್ನು ಹೆಚ್ಚು ಮಾಡಲು ಮುಂದಾಗಿದೆ ಎಂದು ಆರೋಪಿಸಿದರು.
ಮುಂದುವರೆಯುತ್ತಾ, ಇತ್ತೀಚಿಗೆ ಹೊರಡಿಸಲಾದ ಸರ್ಕಾರದ ಹೊಸ ಆದೇಶವು ಕೌಶಲ್ಯಾಧಾರಿತ ಶಿಕ್ಷಣವನ್ನು ನೀಡುವ ಮೂಲಕ ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳಿಗೆ ದೀಪ ಮತ್ತು ಹಣತೆ ಮಾಡಲು, ಅಡಿಕೆ ಕಾಯಿ ಬಿಡಿಸಲು, ಇತ್ಯಾದಿ..ತರಬೇತಿ ನೀಡುತ್ತಾ ಸರ್ಕಾರಿ ಶಾಲೆ ಮಕ್ಕಳನ್ನು ಉನ್ನತ ಶಿಕ್ಷಣದಿಂದ ದೂರ ಉಳಿಯುವಂತೆ ಹಾಗೂ ಬಡ ಕುಟುಂಬದ ಮಕ್ಕಳನ್ನು ಬಾಲ ಕಾರ್ಮಿಕರಾಗಿಸುವ ಸಂಚನ್ನು ಕಾನೂನಾತ್ಮಕವಾಗಿ ಕೆಪಿಎಸ್ ಮ್ಯಾಗ್ನೆಟ್ ಯೋಜನೆಯ ಮೂಲಕ ಅನುಷ್ಠಾನಕ್ಕೆ ತರುತ್ತಿರುವುದು ಬಹಳ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳು ವೈದ್ಯರಾಗಲು, ಇಂಜಿನಿಯರಿಂಗ್ಸ್, ಟೀಚರ್ ಆಗಲು ಕನಸು ಕಾಣಬಾರದೇ? ಎಂದು ಪ್ರಶ್ನಿಸಿದರು.
ನಾವೆಲ್ಲ ರೈತರು ಕಾರ್ಮಿಕರು ನಮ್ಮ ಮಕ್ಕಳನ್ನ ಧೈರ್ಯದಿಂದ ಊರಲ್ಲೇ ಇರುವ ಶಾಲೆಗೆ ಕಳಿಸಿ ನಾವು ಕೆಲಸ ಕಾರ್ಯಗಳಿಗೆ ಹೋಗುತ್ತೇವೆ. ಇನ್ನು ಮುಂದೆ ಊರಿನಲ್ಲಿ ಶಾಲೆ ಇಲ್ಲ ಎಂದರೆ ನಾವು ಯಾವ ಧೈರ್ಯದ ಮೇಲೆ ದೂರದಲ್ಲಿರುವ ಶಾಲೆಗೆ ಕಳಿಸುವುದು. ಅದರಲ್ಲೂ ಹೆಣ್ಣು ಮಕ್ಕಳನ್ನು ಅಷ್ಟು ದೂರ ಕಳಿಸುವುದು ಕಷ್ಟ. ಹಾಗಾಗಿ ನಮ್ಮ ಊರಿನ ಶಾಲೆ ಮುಚ್ಚಿದರೆ ನಮಗೆ ಬಹಳ ತೊಂದರೆ ಆಗುತ್ತೆ ಅಂತ ಗ್ರಾಮಸ್ಥರು ತಮ್ಮ ಕಳವಳವನ್ನ ವ್ಯಕ್ತಪಡಿಸಿದರು.
ನಂತರ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ರಚಿಸಲಾಯಿತು. ಪ್ರತಿಭಟನೆಯಲ್ಲಿ ಎಐಡಿಎಸ್ಓನ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರು ಭರತ್ ಹಾಗೂ ಊರಿನ ವಿದ್ಯಾರ್ಥಿಗಳು ಹಾಗೂ ಪೋಷಕರು ಭಾಗವಹಿಸಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


