ತುಮಕೂರು: ಜಿಲ್ಲೆಯ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಇತ್ತೀಚೆಗೆ ಅಪಘಾತಗಳ ಸರಣಿ ಮುಂದುವರಿದಿದ್ದು, ಪ್ರಯಾಣಿಕರಲ್ಲಿ ಭೀತಿ ಮೂಡಿಸಿದೆ. ಕಳೆದ ಕೇವಲ ಒಂದು ತಿಂಗಳ ಅವಧಿಯಲ್ಲಿ (ಡಿಸೆಂಬರ್ 25 ರಿಂದ ಜನವರಿ 26 ರವರೆಗೆ) ಸಂಭವಿಸಿದ ವಿವಿಧ ರಸ್ತೆ ಅಪಘಾತಗಳಲ್ಲಿ ಬರೋಬ್ಬರಿ 15 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಅಪಘಾತಗಳ ಸರಣಿ:
- ಡಿಸೆಂಬರ್ 25: ಹಿರಿಯೂರು ಬಳಿ ಖಾಸಗಿ ಬಸ್ ಮತ್ತು ಲಾರಿ ನಡುವೆ ನಡೆದ ಅಪಘಾತದಲ್ಲಿ ಮಗು ಸೇರಿದಂತೆ 7 ಮಂದಿ ದುರ್ಮರಣಕ್ಕೀಡಾಗಿದ್ದರು.
- ಜನವರಿ 1: ತುಮಕೂರು ಹೊರವಲಯದ ಕೋರಾ ಬಳಿ ಬೈಕ್ ಸವಾರನ ಸಾವು.
- ಜನವರಿ 9: ವಸಂತನರಸಾಪುರ ಬಳಿ ನಿಂತಿದ್ದ ಲಾರಿಗೆ ಕ್ರೂಸರ್ ಡಿಕ್ಕಿಯಾಗಿ ಮಗು ಸೇರಿದಂತೆ ನಾಲ್ವರು ಅಯ್ಯಪ್ಪ ಭಕ್ತರು ಮೃತಪಟ್ಟಿದ್ದರು.
- ಜನವರಿ 26: ನೆಲಹಾಳ್ ಬಳಿ ನಿಂತಿದ್ದ ಲಾರಿಗೆ ಕಾರು ಡಿಕ್ಕಿಯಾಗಿ ಮೂವರು ಸಾಫ್ಟ್‌ವೇರ್ ಎಂಜಿನಿಯರ್‌ಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಪ್ರಮುಖ ಕಾರಣಗಳು: ಹೆದ್ದಾರಿಯಲ್ಲಿ ಸಂಭವಿಸುತ್ತಿರುವ ಹೆಚ್ಚಿನ ಅಪಘಾತಗಳಿಗೆ ರಸ್ತೆ ಬದಿಯಲ್ಲಿ ಅಸಮರ್ಪಕವಾಗಿ ನಿಲ್ಲಿಸುವ ಲಾರಿಗಳೇ ಕಾರಣ ಎಂಬ ಆರೋಪ ಕೇಳಿಬರುತ್ತಿದೆ. ಚಾಲಕರಿಗೆ ವಿಶ್ರಾಂತಿ ಪಡೆಯಲು ಸರಿಯಾದ ‘ಟ್ರಕ್ ಟರ್ಮಿನಲ್’ ವ್ಯವಸ್ಥೆ ಇಲ್ಲದಿರುವುದು ಹಾಗೂ ಚಾಲಕರ ಅಜಾಗರೂಕತೆ ಈ ದುರಂತಗಳಿಗೆ ಮುಖ್ಯ ಕಾರಣ ಎನ್ನಲಾಗುತ್ತಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್, “ಈ ಹಿಂದೆ ಇದ್ದ ಟ್ರಕ್ ಟರ್ಮಿನಲ್ ಜಾಗವನ್ನು ಹಿಂದಿನ ಸರ್ಕಾರ ಸೈಟ್ ಮಾಡಿ ಮಾರಾಟ ಮಾಡಿದೆ. ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ಅಪಘಾತಗಳನ್ನು ತಡೆಯಲು ಮತ್ತು ಚಾಲಕರಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು” ಎಂದು ಭರವಸೆ ನೀಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


