ತುಮಕೂರು: ಭಾರತ ಸಂವಿಧಾನ ಜಗತ್ತಿನಲ್ಲಿಯೇ ದೊಡ್ಡದಾದ, ವಿಸ್ತಾರವಾದ ಭಾರತೀಯರಿಗೆ ತಮ್ಮ ಹಕ್ಕುಗಳನ್ನು ಕೊಟ್ಟ ಸಂವಿಧಾನವಾಗಿದೆ. ಏಕೆಂದರೆ ಭಾರತದಲ್ಲಿ ಬಹಳಷ್ಟು ಧರ್ಮಗಳಿವೆ, ಭಾಷೆಗಳಿವೆ, ಜಾತಿಗಳಿವೆ. ಭೌಗೋಳಿಕವಾಗಿಯೂ ವೈವಿಧ್ಯತೆಯಿಂದ ಕೂಡಿದೆ. ಇವೆಲ್ಲವನ್ನೂ ಗೌರವಿಸಿ, ಅವುಗಳಿಗೆ ಬೇಕಾದ ಹಕ್ಕು ಮತ್ತು ಕರ್ತವ್ಯಗಳನ್ನು ಕೊಟ್ಟಂತದ್ದು ಸಂವಿಧಾನ. ಹಾಗಾಗಿ ಭಾರತೀಯ ಸಂವಿಧಾನ ಜಗತ್ತಿನಲ್ಲಿಯೇ ಅತ್ಯಂತ ಶ್ರೇಷ್ಠವಾದುದು ಎಂದು ವಿದ್ಯಾವಾಹಿನಿ ಸಮೂಹ ಶಿಕ್ಷಣದ ಕಾರ್ಯದರ್ಶಿಗಳಾದ ಎನ್.ಬಿ.ಪ್ರದೀಪ್ ಕುಮಾರ್ ರವರು ಅಭಿಪ್ರಾಯಪಟ್ಟರು.
ಅವರು ನಗರದ ವಿದ್ಯಾವಾಹಿನಿ, ವಿದ್ಯಾನಿಧಿ ಪದವಿ ಪೂರ್ವ ಕಾಲೇಜು, ವಿದ್ಯಾವಾಹಿನಿ ಐಟಿಐ ಕಾಲೇಜುಗಳ ವತಿಯಿಂದ ಜ.26 ರಂದು ಆಯೋಜಿಸಿದ್ದ 77ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು.
ಡಾ.ಬಿ.ಆರ್.ಅಂಬೇಡ್ಕರ್ ರವರ ನೇತೃತ್ವದಲ್ಲಿ ರಚನೆಯಾದ ಸಂವಿಧಾನವನ್ನು 1950 ಜನವರಿ 26 ರಂದು ಅಧಿಕೃತವಾಗಿ ಜಾರಿಗೆ ತಂದು, ಸರ್ವತಂತ್ರ ಸ್ವತಂತ್ರ ಗಣರಾಜ್ಯವಾಗಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಅಳವಡಿಸಿಕೊಂಡು ಬದುಕುತ್ತಿರುವುದರಿಂದ ಭಾರತ ಪ್ರಗತಿಯತ್ತ ಸಾಗುತ್ತಿದೆ. ವಿಶೇಷವಾಗಿ ಕಳೆದ 30 ವರ್ಷಗಳಲ್ಲಿ ಇಂಟರ್ನೆಟ್ ಬಂದ ಮೇಲೆ ಇನ್ನಷ್ಟು ವೇಗವಾಗಿ ಪ್ರಗತಿಯತ್ತ ಸಾಗುತ್ತಿರುವುದು ಸಂತೋಷಕರವಾದುದು.
ಭಾರತದಲ್ಲಿ ನೈಸರ್ಗಿಕ ಸಂಪನ್ಮೂಲ ಕಡಿಮೆ ಇದ್ದು, ಮಾನವ ಸಂಪನ್ಮೂಲ ಹೆಚ್ಚಿದೆ. ಜೊತೆಗೆ ಟೆಕ್ನಾಲಜಿಯೂ ಬೆಳೆದಿದೆ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹೆಚ್ಚು ಕೌಶಲ್ಯಭರಿತರಾಗಬೇಕು. ಪ್ರತಿಯೊಂದನ್ನು ಚೆನ್ನಾಗಿ ಓದಬೇಕು, ಅರ್ಥ ಮಾಡಿಕೊಳ್ಳಬೇಕು, ಕಲಿಯಬೇಕು. ಜೊತೆಗೆ ಸ್ವಾತಂತ್ರ್ಯ ದಿನ ಹಾಗೂ ಗಣರಾಜ್ಯೋತ್ಸವದಂದು ನಿಮ್ಮ ಕರ್ತವ್ಯಗಳನ್ನು ನೆನಪಿಸಿಕೊಳ್ಳಬೇಕು ಸದಾಕಾಲ ಜವಾಬ್ದಾರಿಯಿಂದ ಬದುಕಬೇಕು. ವಿದ್ಯಾರ್ಥಿಗಳು ಚೆನ್ನಾಗಿ ಓದಿದರೆ, ಶಿಕ್ಷಕರು ಚೆನ್ನಾಗಿ ಪಾಠ ಮಾಡಿದರೆ ಅದೂ ಕೂಡ ದೇಶಭಕ್ತಿಯಾಗುತ್ತದೆ ಎಂದು ತಿಳಿಸುತ್ತಾ, ಭೇದ ಭಾವ ತೊಲಗಿಸಿ, ನಾವು ಭಾರತೀಯರೆಂಬ ಹೆಮ್ಮೆ ಬೆಳೆಸಿಕೊಳ್ಳಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರುಗಳು, ಉಪನ್ಯಾಸಕರು, ಉಪನ್ಯಾಸಕಿಯರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕನ್ನಡ ಉಪನ್ಯಾಸಕರುಗಳಾದ ಸಿ.ಜೆ. ಮಹೇಶ್ ಚಂದ್ರ, ರಾಜಶೇಖರ ಜೆ.ಎಲ್. ಕಾರ್ಯಕ್ರಮ ನಿರೂಪಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


