ಸರಗೂರು: ತಾಲ್ಲೂಕಿನ ಬಿ. ಮಟಕೆರೆ ಕರ್ನಾಟಕ ಪಬ್ಲಿಕ್ ಶಾಲೆಯ ಅಭಿವೃದ್ಧಿ ಸಮಿತಿ (ಸಿಡಿಸಿ) ಅಧ್ಯಕ್ಷರ ನೇಮಕಾತಿ ವಿಚಾರ ಈಗ ವಿವಾದಕ್ಕೆ ಈಡಾಗಿದ್ದು, ಶಾಸಕರ ನಡೆಗೆ ಪೋಷಕರು ಮತ್ತು ಸಮಿತಿ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಶಾಸಕರ ವಿರುದ್ಧ ನಿರ್ಲಕ್ಷ್ಯದ ಆರೋಪ: ಸೋಮವಾರ ಶಾಲೆಯಲ್ಲಿ ನಡೆದ ಸಿಡಿಸಿ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಸದಸ್ಯ ಕೂಡಗಿ ಗೋವಿಂದರಾಜು, “2018-19ರಲ್ಲಿ ಅಂದಿನ ಸಂಸದರಾಗಿದ್ದ ದಿವಂಗತ ಆರ್.ಧ್ರುವನಾರಾಯಣ್ ಅವರು ಗ್ರಾಮೀಣ ಭಾಗದ ಹಿಂದುಳಿದ ವರ್ಗಗಳ ಮಕ್ಕಳಿಗೆ ಗುಣಮಟ್ಟದ ಇಂಗ್ಲಿಷ್ ಶಿಕ್ಷಣ ಸಿಗಲಿ ಎಂಬ ಉದ್ದೇಶದಿಂದ ಈ ಶಾಲೆಯನ್ನು ಮಂಜೂರು ಮಾಡಿಸಿದ್ದರು. ಆದರೆ ಶಾಲೆ ಆರಂಭವಾಗಿ 7 ವರ್ಷಗಳಾದರೂ, ಸ್ಥಳೀಯ ಶಾಸಕರು ಒಮ್ಮೆಯೂ ಶಾಲೆಗೆ ಭೇಟಿ ನೀಡಿ ಇಲ್ಲಿನ ಕುಂದುಕೊರತೆ ಆಲಿಸಿಲ್ಲ” ಎಂದು ಕಿಡಿಕಾರಿದರು.
ನೇಮಕಾತಿ ವಿಚಾರದಲ್ಲಿ ಅಸಮಾಧಾನ: ಹಿಂದಿನ ಅಧ್ಯಕ್ಷ ಭೀಮರಾಜ್ ಅವರ ನಿಧನದ ನಂತರ ತೆರವಾಗಿದ್ದ ಸ್ಥಾನಕ್ಕೆ ಶಾಲೆಯಲ್ಲಿ ಓದುತ್ತಿರುವ ಮಕ್ಕಳ ಪೋಷಕರನ್ನೇ ಅಧ್ಯಕ್ಷರನ್ನಾಗಿ ನೇಮಿಸಬೇಕೆಂದು ಸದಸ್ಯರು ಮನವಿ ಮಾಡಿದ್ದರು. ಆದರೆ, ಸದಸ್ಯರ ಗಮನಕ್ಕೆ ತರದೆ ಬಾಡಗ ಗ್ರಾಮದ ಮಾದಪ್ಪ ಎಂಬುವವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ. ಶಾಲೆಯಲ್ಲಿ ಮಕ್ಕಳಿಲ್ಲದವರನ್ನು ಅಧ್ಯಕ್ಷರನ್ನಾಗಿ ಮಾಡಿರುವುದು ಶಾಲೆಯ ಅಭಿವೃದ್ಧಿಗೆ ಮಾರಕ ಎಂದು ಸದಸ್ಯರು ದೂರಿದ್ದಾರೆ.
ಶಿಕ್ಷಣದಲ್ಲಿ ರಾಜಕೀಯ ಬೇಡ: ಸಭೆಯಲ್ಲಿ ಮಾತನಾಡಿದ ದೇವಲಾಪುರ ನವೀನ್, “ಶಿಕ್ಷಣ ಕ್ಷೇತ್ರದಲ್ಲೂ ರಾಜಕೀಯ ಬೆರೆಸಿ ಶಾಲೆಯ ಅಭಿವೃದ್ಧಿಯನ್ನು ಕುಂಠಿತಗೊಳಿಸಲಾಗುತ್ತಿದೆ. ಧ್ರುವನಾರಾಯಣ್ ಅವರ ಕನಸಿನ ಯೋಜನೆಗೆ ಕಳಂಕ ತರುವ ಕೆಲಸ ನಡೆಯುತ್ತಿದೆ” ಎಂದು ಬೇಸರ ವ್ಯಕ್ತಪಡಿಸಿದರು.
ಬೃಹತ್ ಪ್ರತಿಭಟನೆಯ ಎಚ್ಚರಿಕೆ: ಒಂದು ವೇಳೆ ಶಾಸಕರೇ ಅಧ್ಯಕ್ಷರಾಗಿ ಮುಂದುವರಿಯಬೇಕು ಅಥವಾ ಮಕ್ಕಳ ಪೋಷಕರಿಗೆ ಅಧ್ಯಕ್ಷ ಸ್ಥಾನ ನೀಡಬೇಕು. ಇಲ್ಲವಾದಲ್ಲಿ ಫೆಬ್ರವರಿ 3ರಂದು ಶಾಲೆಯ ಮುಂಭಾಗ ಪೋಷಕರು ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳೊಂದಿಗೆ ಸೇರಿ ಬೃಹತ್ ಪ್ರತಿಭಟನೆ ನಡೆಸಲಾಗುವುದು. ಅಲ್ಲಿಯವರೆಗೆ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ಸಭೆಯಲ್ಲಿ ಒಮ್ಮತದ ನಿರ್ಧಾರ ಕೈಗೊಳ್ಳಲಾಯಿತು.
ಈ ಸಭೆಯಲ್ಲಿ. ಸಿಡಿಸಿ ಸದಸ್ಯರಾದ ಮಾದಪ್ಪ ಬಾಡಗ, ಬಸವರಾಜು, ಪ್ರಸನ್ನ, ಗುರುಸ್ವಾಮಿ, ಗೋವಿಂದರಾಜು, ಚಾಂದು ಸರಿಪ್, ಜ್ಯೋತಿ, ಲೋಕೇಶ್, ನವೀನ್ ದೇವಲಾಪುರ, ನಾಗೇಂದ್ರ, ವಿಠಲ, ಪ್ರಸನ್ನ ಕುಮಾರ್, ನಾಗೇಶ್, ಶಾರದ,ದಾಸ, ಕೆ.ಪಿ.ಮಹದೇವಪ್ಪ ,ವೈಕುಂಠಯ್ಯ ಮುಂತಾದ ಪೋಷಕರು ಹಾಜರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


