ಬೆಂಗಳೂರು: ಕನ್ನಡ ಬಿಗ್ ಬಾಸ್ ಸೀಸನ್ 12ರ ವಿನ್ನರ್ ಪಟ್ಟ ಗಿಲ್ಲಿ ನಟ ಪಾಲಾಗಿದ್ದರೂ, ವಿಧಾನಸಭೆಯಲ್ಲಿ ಈ ವಿಷಯವು ಒಂದು ವಿಭಿನ್ನ ರಾಜಕೀಯ ತಿರುವು ಪಡೆದುಕೊಂಡಿದೆ. ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್ ಅವರು ಕೇಂದ್ರ ಸರ್ಕಾರದ ತೆರಿಗೆ ನೀತಿಯನ್ನು ಟೀಕಿಸುವ ಭರದಲ್ಲಿ, ಈ ಬಾರಿಯ ನಿಜವಾದ ಬಿಗ್ ಬಾಸ್ ವಿನ್ನರ್ ನಿರ್ಮಲಾ ಸೀತಾರಾಮನ್ ಎಂದು ಲೇವಡಿ ಮಾಡಿದ್ದಾರೆ.
ಪ್ರದೀಪ್ ಈಶ್ವರ್ ಹೇಳಿದ್ದೇನು? ನಿನ್ನೆ ಸದನದಲ್ಲಿ ಮಾತನಾಡಿದ ಪ್ರದೀಪ್ ಈಶ್ವರ್, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ವಿರುದ್ಧ ವಾಗ್ದಾಳಿ ನಡೆಸಿದರು. “ಈ ಬಾರಿಯ ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟ ಅಲ್ಲ, ಬದಲಾಗಿ ನಿರ್ಮಲಾ ಸೀತಾರಾಮನ್. ಏಕೆಂದರೆ ಬಿಗ್ ಬಾಸ್ ಗೆದ್ದವರಿಗೆ ಸಿಗುವ 50 ಲಕ್ಷ ರೂಪಾಯಿ ಬಹುಮಾನ ಮೊತ್ತದಲ್ಲಿ ಶೇ. 18ರಷ್ಟು ಜಿಎಸ್‌ಟಿ, ಶೇ. 13ರಷ್ಟು ಇನ್ಕಮ್ ಟ್ಯಾಕ್ಸ್ ಹಾಗೂ ಶೇ. 4ರಷ್ಟು ಸೆಸ್ ಸೇರಿ ಸುಮಾರು 52% ರಷ್ಟು ತೆರಿಗೆ ರೂಪದಲ್ಲಿ ಕೇಂದ್ರದ ಪಾಲಾಗುತ್ತದೆ. ಕೊನೆಗೆ ಗಿಲ್ಲಿಗೆ ಸಿಗುವುದು ಕೇವಲ 35 ಲಕ್ಷ ರೂಪಾಯಿ ಮಾತ್ರ. ಹಾಗಾಗಿ ಅತಿ ಹೆಚ್ಚು ಹಣ ಪಡೆಯುತ್ತಿರುವ ನಿರ್ಮಲಾ ಸೀತಾರಾಮನ್ ಅವರೇ ಅಸಲಿ ವಿನ್ನರ್” ಎಂದು ವ್ಯಂಗ್ಯವಾಡಿದರು.
ಸಿದ್ದರಾಮಯ್ಯ ನನ್ನ ಪಾಲಿನ ಶ್ರೀರಾಮಚಂದ್ರ: ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಶ್ಲಾಘಿಸಿದ ಪ್ರದೀಪ್ ಈಶ್ವರ್, “ಬಡವರ ಹೊಟ್ಟೆ ತುಂಬಿಸುವ ಸಿದ್ದರಾಮಯ್ಯನವರು ನನ್ನ ಪಾಲಿನ ಶ್ರೀರಾಮಚಂದ್ರ. ಕೇವಲ ರಾಮಮಂದಿರ ನಿರ್ಮಾಣ ಮಾಡುವುದು ಮಾತ್ರ ದೇಶಪ್ರೇಮವಲ್ಲ, ಬಡವರ ಹಸಿವು ನೀಗಿಸುವುದು ಕೂಡ ಅತಿ ದೊಡ್ಡ ದೇಶಪ್ರೇಮ. ಅಂತಹ ಕೆಲಸವನ್ನು ನಮ್ಮ ಮುಖ್ಯಮಂತ್ರಿಗಳು ಮಾಡುತ್ತಿದ್ದಾರೆ” ಎಂದು ತಿಳಿಸಿದರು.
ಕೇಂದ್ರದ ತೆರಿಗೆ ನೀತಿ ಹಾಗೂ ರಾಜ್ಯ ಸರ್ಕಾರದ ಜನಪರ ಯೋಜನೆಗಳ ನಡುವಿನ ವ್ಯತ್ಯಾಸವನ್ನು ಬಿಂಬಿಸಲು ಪ್ರದೀಪ್ ಈಶ್ವರ್ ಅವರು ಬಿಗ್ ಬಾಸ್ ವಿನ್ನರ್ ಉದಾಹರಣೆಯನ್ನು ಬಳಸಿಕೊಂಡಿರುವುದು ಈಗ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


