ಬೆಂಗಳೂರು: ಬಿ.ಕೆ. ಹರಿಪ್ರಸಾದ್ ಅವರ ‘ಕಾಲು’ ಕುರಿತಾದ ಹೇಳಿಕೆಯಿಂದಾಗಿ ಕರ್ನಾಟಕ ವಿಧಾನ ಪರಿಷತ್ತಿನಲ್ಲಿ ಶುಕ್ರವಾರ ಭಾರಿ ಗದ್ದಲ ಏರ್ಪಟ್ಟಿದ್ದು, ಕಲಾಪವು ಯಾವುದೇ ಕೆಲಸ ಕಾರ್ಯಗಳು ನಡೆಯದೆ ಮುಂದೂಡಲ್ಪಟ್ಟಿದೆ.
ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ವೇಳೆ ಚರ್ಚೆ ನಡೆಯುತ್ತಿದ್ದಾಗ ಈ ವಿವಾದ ಆರಂಭವಾಯಿತು. ರಾಜ್ಯಪಾಲರು ಸದನದಿಂದ ಹೊರನಡೆಯುವಾಗ ಹರಿಪ್ರಸಾದ್ ಅವರು ಕೈ ತೋರಿಸಿ ಅವಮಾನ ಮಾಡಿದ್ದಾರೆ ಎಂದು ಬಿಜೆಪಿ ಸದಸ್ಯರು ಆರೋಪಿಸಿದರು. ಇದಕ್ಕೆ ಪ್ರತಿಯಾಗಿ ಹರಿಪ್ರಸಾದ್ ಅವರು, “ಕೈ ತೋರಿಸದೆ ಇನ್ನೇನು ಕಾಲು ತೋರಿಸಲು ಆಗುತ್ತದೆಯೇ?” ಎಂದು ಪ್ರಶ್ನಿಸಿದರು. ಈ ಹೇಳಿಕೆಯು ವಿರೋಧ ಪಕ್ಷದ ಸದಸ್ಯರನ್ನು ಕೆರಳಿಸಿತು.
ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದರು. ಹರಿಪ್ರಸಾದ್ ಅವರು ರಾಜ್ಯಪಾಲರಿಗೆ ಮತ್ತು ಸಂವಿಧಾನಕ್ಕೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ, ಕೂಡಲೇ ಅವರನ್ನು ಸದನದಿಂದ ಅಮಾನತುಗೊಳಿಸಬೇಕು ಎಂದು ಪಟ್ಟು ಹಿಡಿದರು.
ಸಭಾಪತಿ ಬಸವರಾಜ ಹೊರಟ್ಟಿ ಅವರು ಮಧ್ಯಪ್ರವೇಶಿಸಿ, ಹಿರಿಯ ಸದಸ್ಯರಾದ ಹರಿಪ್ರಸಾದ್ ಅವರು ವಿಷಾದ ವ್ಯಕ್ತಪಡಿಸುವಂತೆ ಸೂಚಿಸಿದರು. ಸಭಾಪತಿಗಳ ಮನವಿಗೆ ಓಗೊಟ್ಟು ಹರಿಪ್ರಸಾದ್ ವಿಷಾದ ವ್ಯಕ್ತಪಡಿಸಿದರೂ, ವಿಪಕ್ಷಗಳು ಅಮಾನತಿಗೆ ಒತ್ತಾಯಿಸಿ ಪ್ರತಿಭಟನೆ ಮುಂದುವರಿಸಿದವು. ಗದ್ದಲ ನಿಯಂತ್ರಣಕ್ಕೆ ಬಾರದ ಕಾರಣ ಸಭಾಪತಿಗಳು ಅಸಮಾಧಾನ ವ್ಯಕ್ತಪಡಿಸಿ ಸದನವನ್ನು ಮುಂದೂಡಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


