ತುಮಕೂರು: ಜಿಲ್ಲೆಯ ಶಿರಾ ತಾಲೂಕಿನಲ್ಲಿ ಆರು ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಪೋಷಕರ ವಿರೋಧದ ನಡುವೆಯೂ ಪ್ರೇಮ ವಿವಾಹವಾಗಿದ್ದು, ಈಗ ಜೀವ ಬೆದರಿಕೆ ಹಿನ್ನೆಲೆಯಲ್ಲಿ ರಕ್ಷಣೆ ನೀಡುವಂತೆ ಪೊಲೀಸರ ಮೊರೆ ಹೋಗಿದೆ.
ಘಟನೆಯ ವಿವರ: ಶಿರಾ ತಾಲೂಕಿನ ಹುಲಿಕುಂಟೆ ಹೋಬಳಿಯ ತಿಮ್ಮನಹಳ್ಳಿ ಗ್ರಾಮದ ಮೋಹನ್ ಕುಮಾರ್ ಮತ್ತು ಲಟ್ಟನಹಳ್ಳಿ ಗ್ರಾಮದ ಸಂಗೀತಾ ಕಳೆದ 6 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇವರ ಪ್ರೀತಿಗೆ ಯುವತಿಯ ಮನೆಯವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇದರಿಂದಾಗಿ ಅನಿವಾರ್ಯವಾಗಿ ಈ ಜೋಡಿ ಶಿರಾದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಕಾನೂನುಬದ್ಧವಾಗಿ ಮದುವೆಯಾಗಿದ್ದಾರೆ.
ಜೀವ ಬೆದರಿಕೆ ಆರೋಪ: ಮದುವೆಯಾದ ಬಳಿಕ ಯುವತಿಯ ತಂದೆ ಹಾಗೂ ಕುಟುಂಬದವರಿಂದ ತಮಗೆ ಮತ್ತು ತಮ್ಮ ಕುಟುಂಬಕ್ಕೆ ಜೀವ ಬೆದರಿಕೆ ಇದೆ ಎಂದು ನವದಂಪತಿಗಳು ಆರೋಪಿಸಿದ್ದಾರೆ. ಈ ಕುರಿತು ವಿಡಿಯೋ ಬಿಡುಗಡೆ ಮಾಡಿರುವ ಯುವತಿ ಸಂಗೀತಾ, “ನಾವು ಮದುವೆಯಾಗಿ ನಮ್ಮ ಊರಿಗೆ ಹೋಗುತ್ತಿದ್ದೇವೆ. ನನ್ನ ತಂದೆಯ ಕಡೆಯಿಂದ ನನ್ನ ಪತಿ ಹಾಗೂ ಅವರ ಕುಟುಂಬಕ್ಕೆ ಅಪಾಯವಿದೆ. ನಮಗೆ ಏನಾದರೂ ತೊಂದರೆಯಾದರೆ ಅದಕ್ಕೆ ನನ್ನ ತಂದೆಯೇ ಜವಾಬ್ದಾರರು,” ಎಂದು ಹೇಳಿದ್ದಾರೆ.
ಯುವಕ ಮೋಹನ್ ಕುಮಾರ್ ಮಾತನಾಡಿ, “ನಾವು ಮದುವೆ ಮಾಡಿಕೊಡುವಂತೆ ಈ ಹಿಂದೆ ಕೇಳಿದ್ದೆವು. ಮೊದಲು ಒಪ್ಪಿದವರು ನಂತರ ನಿರಾಕರಿಸಿದರು. ಈಗ ಮದುವೆಯಾದ ಮೇಲೆ ‘ಕೊಚ್ಚಿ ಹಾಕ್ತೀನಿ, ಕಡೀತೀನಿ’ ಎಂದು ಬೆದರಿಕೆ ಹಾಕುತ್ತಿದ್ದಾರೆ. ನಮ್ಮ ಅಣ್ಣನಿಗೂ ಬೆದರಿಕೆ ಬಂದಿದೆ. ದಯವಿಟ್ಟು ನಮಗೆ ರಕ್ಷಣೆ ನೀಡಿ,” ಎಂದು ಮನವಿ ಮಾಡಿದ್ದಾರೆ.
ಸಮುದಾಯದ ಮುಖಂಡರ ಮನವಿ: ಈ ಮದುವೆಗೆ ಸಾಕ್ಷಿಯಾದ ಮುಖಂಡರೊಬ್ಬರು ಮಾತನಾಡಿ, “ಇಬ್ಬರೂ ಒಂದೇ ಸಮುದಾಯದವರಾಗಿದ್ದರೂ ಪೋಷಕರು ಈ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ. ಇತ್ತೀಚೆಗೆ ಮರ್ಯಾದಾ ಹತ್ಯೆಗಳಂತಹ ಘಟನೆಗಳು ನಡೆಯುತ್ತಿವೆ. ಈ ನವದಂಪತಿಗೆ ಯಾವುದೇ ಅಪಾಯವಾಗದಂತೆ ಪೊಲೀಸರು ಸೂಕ್ತ ರಕ್ಷಣೆ ನೀಡಬೇಕು,” ಎಂದು ಒತ್ತಾಯಿಸಿದ್ದಾರೆ.
ಸದ್ಯ ಈ ಪ್ರೇಮಿಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ರಕ್ಷಣೆಗಾಗಿ ಪೊಲೀಸರ ಹಸ್ತಕ್ಷೇಪವನ್ನು ಎದುರು ನೋಡುತ್ತಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


