ತುಮಕೂರು: ಸೈಬರ್ ವಂಚಕರ ಜಾಲಕ್ಕೆ ಬಿದ್ದು ಜಿಲ್ಲೆಯ ನಾಗವಲ್ಲಿಯ ವ್ಯಕ್ತಿಯೊಬ್ಬರು ಬರೋಬ್ಬರಿ 7.85 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ನಡೆದಿದೆ. ಆರ್‌ಟಿಒ (RTO) ಹೆಸರಿನಲ್ಲಿ ಬಂದ ನಕಲಿ ಎಪಿಕೆ (APK) ಫೈಲ್ ಕ್ಲಿಕ್ ಮಾಡಿದ್ದೇ ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದೆ.
ನಡೆದದ್ದೇನು? ನಾಗವಲ್ಲಿಯ ನಿವಾಸಿ ರಖೀಬ್ ಅಹ್ಮದ್ ಖಾನ್ ಎಂಬುವವರಿಗೆ ಜನವರಿ 23ರಂದು ಅಪರಿಚಿತ ಸಂಖ್ಯೆಯೊಂದರಿಂದ ‘ಆರ್‌ಟಿಒ ಚಲನ್’ ಹೆಸರಿನ ಲಿಂಕ್ ಇರುವ ಎಪಿಕೆ ಫೈಲ್ ಬಂದಿತ್ತು. ಆರ್‌ಟಿಒಗೆ ಸಂಬಂಧಿಸಿದ್ದು ಎಂದು ನಂಬಿದ ರಖೀಬ್ ಅದನ್ನು ಕ್ಲಿಕ್ ಮಾಡಿದ್ದಾರೆ. ಅಂದೇ ರಾತ್ರಿ ಅವರ ವಾಟ್ಸಾಪ್ ಅಪ್‌ಡೇಟ್ ಕೇಳಿದ್ದು, ಒಟಿಪಿ (OTP) ಪಡೆದು ಅಪ್‌ಡೇಟ್ ಮಾಡಿದ್ದಾರೆ. ಈ ವೇಳೆ 3-4 ಬಾರಿ ಒಟಿಪಿ ಬಂದಿದ್ದರೂ, ಅವರು ಯಾರೊಂದಿಗೂ ಅದನ್ನು ಹಂಚಿಕೊಂಡಿರಲಿಲ್ಲ.
ಹಂತ ಹಂತವಾಗಿ ಹಣ ವರ್ಗಾವಣೆ: ಯಾರೊಂದಿಗೂ ಒಟಿಪಿ ಹಂಚಿಕೊಳ್ಳದಿದ್ದರೂ, ಸೈಬರ್ ಖದೀಮರು ರಖೀಬ್ ಅವರ ಮೊಬೈಲ್ ಅನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದರು. ಜನವರಿ 27ರಂದು ಅವರ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ಒಟ್ಟು 7,85,025 ರೂಪಾಯಿಗಳನ್ನು ಬೇರೆ ಖಾತೆಗಳಿಗೆ ವರ್ಗಾಯಿಸಿಕೊಳ್ಳಲಾಗಿದೆ.
ಪೊಲೀಸ್ ದೂರು: ತಾನು ವಂಚನೆಗೆ ಒಳಗಾಗಿರುವುದು ತಿಳಿಯುತ್ತಿದ್ದಂತೆಯೇ ರಖೀಬ್ ಅವರು ತುಮಕೂರು ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸಾರ್ವಜನಿಕರಿಗೆ ಎಚ್ಚರಿಕೆ: ಇತ್ತೀಚಿನ ದಿನಗಳಲ್ಲಿ ಆರ್ ಟಿಒ ಚಲನ್, ವಿದ್ಯುತ್ ಬಿಲ್ ಅಥವಾ ಕುರಿಯರ್ ಹೆಸರಿನಲ್ಲಿ ಎಪಿಕೆ ಫೈಲ್‌ಗಳನ್ನು ಕಳುಹಿಸಿ ವಂಚಿಸುವ ಪ್ರಕರಣಗಳು ಹೆಚ್ಚುತ್ತಿವೆ. ಇಂತಹ ಅನುಮಾನಾಸ್ಪದ ಲಿಂಕ್ ಅಥವಾ ಫೈಲ್‌ಗಳನ್ನು ಕ್ಲಿಕ್ ಮಾಡದಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


