ಬೆಂಗಳೂರು: ರಾಜಧಾನಿಯ ಕಸ ವಿಲೇವಾರಿ ವಿಚಾರವಾಗಿ ರಾಜ್ಯ ರಾಜಕಾರಣದಲ್ಲಿ ಈಗ ‘ಕಸದ ಕಿಚ್ಚು’ ಹತ್ತಿಕೊಂಡಿದೆ. ಬೆಂಗಳೂರಿನ ಕಸವನ್ನು ದೊಡ್ಡಬಳ್ಳಾಪುರಕ್ಕೆ ಸಾಗಿಸುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಬಿಜೆಪಿ ನಾಯಕರ ವಿರುದ್ಧ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗುಡುಗಿದ್ದಾರೆ. “ಬಿಜೆಪಿ ನಾಯಕರು ಬ್ಲ್ಯಾಕ್ ಮೇಲ್ ತಂತ್ರ ಬಿಡದಿದ್ದರೆ, ಅವರ ಮನೆ ಮುಂದೆ ಹಾಗೂ ಬಿಜೆಪಿ ಕಚೇರಿ ಮುಂದೆಯೇ ಕಸ ಹಾಕಿಸಬೇಕಾಗುತ್ತದೆ” ಎಂದು ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಘಟನೆಯ ಹಿನ್ನೆಲೆ:
ಬೆಂಗಳೂರಿನ ಕಸವನ್ನು ದೊಡ್ಡಬಳ್ಳಾಪುರಕ್ಕೆ ವೈಜ್ಞಾನಿಕವಾಗಿ ಸಾಗಿಸಲಾಗುತ್ತಿಲ್ಲ ಎಂದು ಆರೋಪಿಸಿ ಬಿಜೆಪಿ ಶಾಸಕರು ಮತ್ತು ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ಬಿಜೆಪಿ ನಾಯಕರ ವಿರುದ್ಧ ಕೆಂಡಾಮಂಡಲವಾದರು.
“ಬಿಜೆಪಿಯ ಎಲ್ಲಾ ಶಾಸಕರು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ. ತಮ್ಮ ಕ್ಷೇತ್ರಕ್ಕೆ ಅನುದಾನ ಬೇಕು ಎಂಬ ಕಾರಣಕ್ಕೆ ಅಪಘಾತದ ವಿಚಾರವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ. ಗೌರವದಿಂದ ಇದ್ದರೆ ಸರಿ, ಇಲ್ಲದಿದ್ದರೆ ಕರುಣೆ ತೋರಿಸುವುದಿಲ್ಲ” ಎಂದು ಕಿಡಿಕಾರಿದರು.
“ಕಸವನ್ನು ಎಲ್ಲಾದರೂ ಒಂದು ಕಡೆ ಹಾಕಲೇಬೇಕಲ್ಲವೇ? ಅಲ್ಲೂ ಬೇಡ, ಇಲ್ಲೂ ಬೇಡ ಎಂದರೆ ಎಲ್ಲಿಗೆ ಹೋಗಬೇಕು? ಸುಮ್ಮನೆ ಬ್ಲ್ಯಾಕ್‌ಮೇಲ್ ಮಾಡುವುದನ್ನು ನಿಲ್ಲಿಸದಿದ್ದರೆ, ಈ ಕಸವನ್ನು ಆರ್. ಅಶೋಕ್ ಮನೆಗೆ, ವಿಜಯೇಂದ್ರ ಮನೆಗೆ ಅಥವಾ ಬಿಜೆಪಿ ಕಚೇರಿ ಮುಂದೆ ಸುರಿಸಬೇಕಾಗುತ್ತದೆ” ಎಂದು ವಾರ್ನಿಂಗ್ ನೀಡಿದರು.
ಕಸ ವಿಲೇವಾರಿಗೆ ಅಡ್ಡಿಪಡಿಸುವವರ ವಿರುದ್ಧ ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆ (ESMA) ಅಡಿಯಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.
ಅಪಘಾತದ ಬಗ್ಗೆ ಪ್ರತಿಕ್ರಿಯೆ: ದೊಡ್ಡಬಳ್ಳಾಪುರದಲ್ಲಿ ನಡೆದ ಅಪಘಾತದ ಬಗ್ಗೆ ವಿಷಾದ ವ್ಯಕ್ತಪಡಿಸಿದ ಅವರು, ಆ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


