ಬೆಂಗಳೂರು: ಹಿರಿಯ ಕೆಎಎಸ್ (KAS) ಅಧಿಕಾರಿಯೊಬ್ಬರ ವಿರುದ್ಧ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ಅಪಪ್ರಚಾರ ಮಾಡಿದ ಆರೋಪದ ಮೇಲೆ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರನ್ನು ಸಿಸಿಬಿ (CCB) ಪೊಲೀಸರು ಬಂಧಿಸಿದ್ದಾರೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (MUDA) ಮಾಜಿ ಆಯುಕ್ತ ಹಾಗೂ ಹಿರಿಯ ಕೆಎಎಸ್ ಅಧಿಕಾರಿ ಡಿ.ಬಿ. ನಟೇಶ್ ಅವರು ನೀಡಿದ ದೂರಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ಫೆಬ್ರವರಿ 18ರಂದು ಬೆಂಗಳೂರು ನಗರ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿತ್ತು.
ಅಧಿಕಾರಿ ಡಿ.ಬಿ. ನಟೇಶ್ ಅವರ ಫೋಟೋಗಳನ್ನು ಬಳಸಿ ನಕಲಿ ದಾಖಲೆಗಳು ಮತ್ತು ಆಡಿಯೋ ಕ್ಲಿಪ್‌ಗಳನ್ನು ಸೃಷ್ಟಿಸಲಾಗಿದೆ. ಈ ನಕಲಿ ದಾಖಲೆಗಳನ್ನು ಸ್ನೇಹಮಯಿ ಕೃಷ್ಣ ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಅಪ್‌ಲೋಡ್ ಮಾಡಿ, ಅಧಿಕಾರಿಯ ಮಾನಹಾನಿ ಮಾಡುವ ಉದ್ದೇಶದಿಂದ ಸುಳ್ಳು ಪ್ರಚಾರ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಮುಂಬಡ್ತಿಗಾಗಿ ಕೋಟ್ಯಂತರ ರೂಪಾಯಿ ಲಂಚ ನೀಡಲಾಗಿದೆ ಎಂಬರ್ಥದ ಸ್ಫೋಟಕ ಆರೋಪಗಳನ್ನು ಇತ್ತೀಚೆಗೆ ಕೃಷ್ಣ ಅವರು ಮಾಡಿದ್ದರು.
ಪ್ರಕರಣದ ತನಿಖೆ ಕೈಗೆತ್ತಿಕೊಂಡ ಸಿಸಿಬಿ ಪೊಲೀಸರು, ದೂರುದಾರರು ಮತ್ತು ಸಾಮಾಜಿಕ ಮಾಧ್ಯಮಗಳಿಂದ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ನ್ಯಾಯಾಲಯದಿಂದ ಸರ್ಚ್ ವಾರಂಟ್ ಪಡೆದ ನಂತರ, ಮೈಸೂರಿನಲ್ಲಿರುವ ಸ್ನೇಹಮಯಿ ಕೃಷ್ಣ ಅವರ ನಿವಾಸದ ಮೇಲೆ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ವಿಚಾರಣೆಗೆ ಹಾಜರಾಗುವಂತೆ ಕೃಷ್ಣ ಅವರಿಗೆ ನೋಟಿಸ್ ನೀಡಲಾಗಿತ್ತು. ಪ್ರಸ್ತುತ ಅವರನ್ನು ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎಂದು ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


