ಬೆಂಗಳೂರು: ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರಿಗೆ ಸಂಕಷ್ಟಗಳ ಸರಮಾಲೆ ಮುಂದುವರಿದಿದ್ದು, ಮಹಿಳೆಯೊಬ್ಬರು ನೀಡಿದ ದೂರಿನ ಹಿನ್ನೆಲೆಯಲ್ಲಿ ಅವರ ವಿರುದ್ಧ ಮತ್ತೊಂದು ಹೊಸ ಪ್ರಕರಣ ದಾಖಲಾಗಿದೆ.
ಪ್ರಕರಣದ ಹಿನ್ನೆಲೆ:
ಇತ್ತೀಚೆಗಷ್ಟೇ ಮುಡಾ ಮಾಜಿ ಆಯುಕ್ತ ಜಿ.ಬಿ. ನಟೇಶ್ ವಿರುದ್ಧ ನಕಲಿ ದಾಖಲೆಗಳನ್ನು ಪ್ರಸಾರ ಮಾಡಿದ ಆರೋಪದ ಮೇಲೆ ಸಿಸಿಬಿ ಪೊಲೀಸರು ಸ್ನೇಹಮಯಿ ಕೃಷ್ಣ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಈ ವಿಚಾರಣೆ ಮುಗಿಸಿ ಶನಿವಾರವಷ್ಟೇ ಅವರು ಬಿಡುಗಡೆಯಾಗಿದ್ದರು. ಆದರೆ, ಅದೇ ದಿನ ಸಂಜೆ ಬೆಂಗಳೂರಿನ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ಹೊಸ ಎಫ್‌ಐಆರ್ (FIR) ದಾಖಲಾಗಿದೆ.
ಎಲ್ ಐಸಿ ಕಾಲೋನಿಯ ನಿವಾಸಿ ಪವಿತ್ರಾ ಬಿ.ಎನ್. ಎಂಬುವವರು ಈ ದೂರು ನೀಡಿದ್ದಾರೆ. ಸ್ನೇಹಮಯಿ ಕೃಷ್ಣ ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕ ಮೈಲಾರಪ್ಪ ಬಿ.ಸಿ. ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ.
ದೂರುದಾರರ ಪ್ರಕಾರ, 2025ರ ಡಿಸೆಂಬರ್ 5ರಂದು ಅವರ ನಿವಾಸಕ್ಕೆ ಒಂದು ಪತ್ರ ಬಂದಿತ್ತು. ಅದರಲ್ಲಿ ಅವರ ದಿವಂಗತ ಪತಿ ಹಾಗೂ ವಕೀಲ ರಘು ಅವರ ಬಗ್ಗೆ ಅವಹೇಳನಕಾರಿ ಮತ್ತು ಮಾನನಷ್ಟ ಉಂಟುಮಾಡುವಂತಹ ಹೇಳಿಕೆಗಳಿದ್ದವು. ಅಲ್ಲದೆ, ಮೈಲಾರಪ್ಪ ಅವರ ವಿರುದ್ಧ ಇರುವ ಪ್ರಕರಣಗಳನ್ನು ಹಿಂಪಡೆಯುವಂತೆ ಬೆದರಿಕೆ ಹಾಕಲಾಗಿತ್ತು ಎಂದು ಪವಿತ್ರಾ ಆರೋಪಿಸಿದ್ದಾರೆ.
ಈ ಹಿಂದೆ ಡಿಸೆಂಬರ್ 6, 2025 ರಂದು ಪೊಲೀಸರು ಈ ಬಗ್ಗೆ ನಾನ್–ಕಾಗ್ನಿಜೇಬಲ್ ರಿಪೋರ್ಟ್ (NCR) ದಾಖಲಿಸಿಕೊಂಡಿದ್ದರು. ಈಗ ನ್ಯಾಯಾಲಯದಿಂದ ಅನುಮತಿ ಪಡೆದ ನಂತರ, ಪೊಲೀಸರು ಬಿಎನ್ ಎಸ್ (BNS) ಸೆಕ್ಷನ್ 351 (ಕ್ರಿಮಿನಲ್ ಬೆದರಿಕೆ) ಮತ್ತು 352 (ಶಾಂತಿ ಭಂಗ ತರುವ ಉದ್ದೇಶದಿಂದ ಅವಮಾನಿಸುವುದು) ಅಡಿಯಲ್ಲಿ ಅಧಿಕೃತವಾಗಿ ಎಫ್ ಐಆರ್ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


