ಮಂಗಳೂರು: ಆಟವಾಡುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಲೂಡೋ ಕಾಯಿನ್ (ದಾಳ) ನುಂಗಿದ ಪರಿಣಾಮ ಎಂಟು ವರ್ಷದ ಬಾಲಕಿಯೊಬ್ಬಳು ಉಸಿರುಗಟ್ಟಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಮಂಗಳೂರು ಸಮೀಪದ ಉಳ್ಳಾಲದ ಕೊಲ್ಯದಲ್ಲಿ ನಡೆದಿದೆ.
ಘಟನೆಯ ವಿವರ:
ಮೃತ ಬಾಲಕಿಯನ್ನು ತನುಷ್ಕಾ ಎಂದು ಗುರುತಿಸಲಾಗಿದೆ. ಈಕೆ ಕಾಸರಗೋಡು ಜಿಲ್ಲೆಯ ಮಧೂರಿನ ರಾಜೇಶ್ ಗಟ್ಟಿ ಮತ್ತು ರಾಜೇಶ್ವರಿ ದಂಪತಿಯ ಪುತ್ರಿ. ತನುಷ್ಕಾ ತೊಕ್ಕೊಟ್ಟಿನ ಸೆಂಟ್ ಸೆಬಾಸ್ಟಿಯನ್ ಶಾಲೆಯಲ್ಲಿ 2ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು.
ಶನಿವಾರ ಮಧ್ಯಾಹ್ನ ತನುಷ್ಕಾ ತನ್ನ ಸಹೋದರ ಮತ್ತು ಸಹೋದರಿಯೊಂದಿಗೆ ಮನೆಯಲ್ಲಿ ಲೂಡೋ ಆಟವಾಡುತ್ತಿದ್ದಳು. ಈ ವೇಳೆ ಆಟದ ಪ್ಲಾಸ್ಟಿಕ್ ಕಾಯಿನ್ ಅನ್ನು ಆಕಸ್ಮಿಕವಾಗಿ ನುಂಗಿದ್ದಾಳೆ. ಕಾಯಿನ್ ಗಂಟಲಿನಲ್ಲಿ ಸಿಲುಕಿಕೊಂಡಿದ್ದರಿಂದ ಬಾಲಕಿಗೆ ತೀವ್ರವಾಗಿ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ.
ತಕ್ಷಣವೇ ಬಾಲಕಿಯನ್ನು ಕುಟುಂಬಸ್ಥರು ಮತ್ತು ನೆರೆಹೊರೆಯವರು ಸೇರಿ ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ದೇರಳಕಟ್ಟೆಯ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ದುರದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಸಾವನ್ನಪ್ಪಿದ್ದಾಳೆ.
ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಬಾಲಕಿಯ ಶ್ವಾಸನಾಳದಲ್ಲಿ ಪ್ಲಾಸ್ಟಿಕ್ ಕಾಯಿನ್ ಸಿಲುಕಿದ್ದೇ ಸಾವಿಗೆ ನೇರ ಕಾರಣ ಎಂದು ತಿಳಿದುಬಂದಿದೆ. ಬಾಲಕಿಯ ತಾಯಿ ಉಳ್ಳಾಲದ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದು, ಇಡೀ ಕುಟುಂಬ ಕೊಲ್ಯದ ಬಾಡಿಗೆ ಮನೆಯಲ್ಲಿ ವಾಸವಿತ್ತು. ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


