ಕೆ.ಆರ್.ಪೇಟೆ: ತಾಲೂಕಿನ ಮಾಳಗೂರು ಡೈರಿಯಲ್ಲಿ ಹಾಲಿನ ತೂಕದಲ್ಲಿ ಭಾರಿ ಮೋಸ ಮಾಡಲಾಗುತ್ತಿದೆ ಎಂದು ಆರೋಪಿಸಿ, ಆಕ್ರೋಶಗೊಂಡ ಹಾಲು ಉತ್ಪಾದಕರು ಆಡಳಿತ ಮಂಡಳಿ ಹಾಗೂ ಕಾರ್ಯದರ್ಶಿ ವಿರುದ್ಧ ತೀವ್ರ ಪ್ರತಿಭಟನೆ ನಡೆಸಿದ್ದಾರೆ.
ಪ್ರತಿ ಹಾಲು ಉತ್ಪಾದಕರಿಂದ ಪ್ರತಿದಿನ ಬೆಳಿಗ್ಗೆ 600 ಗ್ರಾಂ ಹಾಗೂ ಸಂಜೆ 600 ಗ್ರಾಂ ಹಾಲಿನ ತೂಕದಲ್ಲಿ ಅನ್ಯಾಯ ಮಾಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ಗಂಭೀರ ಆರೋಪ ಮಾಡಿದ್ದಾರೆ. ಹೈನುಗಾರಿಕೆಯೇ ಮುಖ್ಯ ಕಸುಬಾಗಿರುವ ಬಡ ರೈತರ ಕಷ್ಟದ ದುಡಿಮೆಗೆ ಕನ್ನಡಿಡಿಯುವ ಇಂತಹ ಅಕ್ರಮಗಳನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಪ್ರತಿಭಟನೆಯ ಬಿಸಿ ಹೆಚ್ಚುತ್ತಿದ್ದಂತೆ ಎಚ್ಚೆತ್ತ ಡೈರಿ ಕಾರ್ಯದರ್ಶಿ, ಅಳತೆಯಲ್ಲಿ ವ್ಯತ್ಯಾಸವಾಗುತ್ತಿರುವುದನ್ನು ಸಭೆಯಲ್ಲಿ ಒಪ್ಪಿಕೊಂಡಿದ್ದಾರೆ. ಅಲ್ಲದೆ, ಈವರೆಗೆ ರೈತರಿಗೆ ಉಂಟಾಗಿರುವ ನಷ್ಟವನ್ನು ತಾವೇ ಭರಿಸಿ, ಅದನ್ನು ಹಾಲು ಉತ್ಪಾದಕರಿಗೆ ಸಂಪೂರ್ಣವಾಗಿ ತುಂಬಿಕೊಡುವುದಾಗಿ ಭರವಸೆ ನೀಡಿದ್ದಾರೆ.
ಕೂಡಲೇ ಮನ್ಮುಲ್ (ಮಂಡ್ಯ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ) ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ತನಿಖೆ ನಡೆಸಬೇಕು. ಈ ತೂಕದ ವ್ಯತ್ಯಾಸದ ಅಕ್ರಮ ಎಷ್ಟು ದಿನಗಳಿಂದ ನಡೆಯುತ್ತಿದೆ ಎಂಬುದನ್ನು ಪತ್ತೆ ಹಚ್ಚಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಬಲವಾಗಿ ಒತ್ತಾಯಿಸಿದ್ದಾರೆ.
ವರದಿ: ಮಂಜು ಶ್ರವಣೂರು, ಹೊಳೆನರಸೀಪುರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
