ಬೆಂಗಳೂರು: ‘ಕಾಂತಾರ’ ಸಿನಿಮಾದ ದೈವದ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ ಆರೋಪ ಎದುರಿಸುತ್ತಿರುವ ಬಾಲಿವುಡ್ ನಟ ರಣವೀರ್ ಸಿಂಗ್ ಅವರಿಗೆ ಕರ್ನಾಟಕ ಹೈಕೋರ್ಟ್ ಮಂಗಳವಾರ ತೀವ್ರ ತರಾಟೆಗೆ ತೆಗೆದುಕೊಂಡಿದೆ. “ನೀವು ಎಷ್ಟೇ ದೊಡ್ಡ ಸೂಪರ್ ಸ್ಟಾರ್ ಆಗಿದ್ದರೂ, ಜನರ ಧಾರ್ಮಿಕ ಭಾವನೆಗಳ ವಿಚಾರದಲ್ಲಿ ನಾಲಿಗೆ ಮೇಲೆ ಹಿಡಿತವಿರಲಿ” ಎಂದು ನ್ಯಾಯಾಲಯ ಎಚ್ಚರಿಸಿದೆ.
ಪ್ರಕರಣದ ಹಿನ್ನೆಲೆ:
ಗೋವಾದಲ್ಲಿ ನಡೆದ ಅಂತರಾಷ್ಟ್ರೀಯ ಚಲನಚಿತ್ರೋತ್ಸವದ (IFFI) ವೇಳೆ ನಟ ರಿಷಬ್ ಶೆಟ್ಟಿ ಅವರನ್ನು ಹೊಗಳುವ ಭರದಲ್ಲಿ ರಣವೀರ್ ಸಿಂಗ್ ಅವರು ‘ಕಾಂತಾರ’ ಚಿತ್ರದ ದೈವವನ್ನು ‘ಫೀಮೇಲ್ ಗೋಸ್ಟ್’ (ಮಹಿಳಾ ದೆವ್ವ) ಎಂದು ಕರೆದಿದ್ದರು ಹಾಗೂ ಮಿಮಿಕ್ರಿ ಮಾಡಿದ್ದರು. ಇದು ತುಳುನಾಡಿನ ದೈವಾರಾಧನೆಗೆ ಮತ್ತು ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಆರೋಪಿಸಿ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿತ್ತು. ಇದನ್ನು ರದ್ದುಗೊಳಿಸುವಂತೆ ಕೋರಿ ರಣವೀರ್ ಸಿಂಗ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ಹೈಕೋರ್ಟ್ ಹೇಳಿದ್ದೇನು?
ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠವು ಈ ಅರ್ಜಿಯ ವಿಚಾರಣೆ ನಡೆಸಿತು, “ಸೂಪರ್ ಸ್ಟಾರ್ ಆದವರು ಕಾನೂನಿಗಿಂತ ಮೇಲಲ್ಲ. ರಣವೀರ್ ಸಿಂಗ್ ಅವರಿಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ, ಅವರು ಸಮಾಜದ ಮೇಲೆ ಪ್ರಭಾವ ಬೀರುವ ವ್ಯಕ್ತಿ. ಇಂತಹ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಧಾರ್ಮಿಕ ವಿಚಾರಗಳ ಬಗ್ಗೆ ಮಾತನಾಡುವಾಗ ಎಚ್ಚರದಿಂದಿರಬೇಕು, ನೀವು ಕ್ಷಮೆ ಕೇಳಿರಬಹುದು, ಆದರೆ ಒಮ್ಮೆ ಆಡಿದ ಮಾತುಗಳು ವಾಪಸ್ ಬರುವುದಿಲ್ಲ. ಜನರು ಅದನ್ನು ಮರೆಯಬಹುದು, ಆದರೆ ಇಂಟರ್ನೆಟ್ ಸದಾ ನೆನಪಿಟ್ಟುಕೊಳ್ಳುತ್ತದೆ. ದೈವವನ್ನು ದೆವ್ವ ಎನ್ನುವುದು ಸರಿಯಲ್ಲ. ಇನ್ನೊಬ್ಬರ ಭಾವನೆಗಳಿಗೆ ಘಾಸಿ ಮಾಡುವ ಹಕ್ಕು ಯಾರಿಗೂ ಇಲ್ಲ. ವೇದಿಕೆಯ ಮೇಲೆ ನಿಂತು ಏನೇನೋ ಮಾತನಾಡುವುದನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ.
ರಣವೀರ್ ಪರ ವಾದ ಮಂಡಿಸಿದ ಹಿರಿಯ ವಕೀಲ ಸಾಜನ್ ಪೂವಯ್ಯ ಅವರು, “ನಟ ರಿಷಬ್ ಶೆಟ್ಟಿ ಅವರ ನಟನೆಯನ್ನು ಹೊಗಳುವ ಉದ್ದೇಶವಿತ್ತೇ ಹೊರತು ಯಾರಿಗೂ ಅವಮಾನ ಮಾಡುವ ಉದ್ದೇಶವಿರಲಿಲ್ಲ. ಈಗಾಗಲೇ ಈ ಬಗ್ಗೆ ಕ್ಷಮೆಯಾಚಿಸಲಾಗಿದೆ ಮತ್ತು ತನಿಖೆಗೆ ಸಹಕರಿಸಲಾಗುವುದು” ಎಂದು ತಿಳಿಸಿದರು. ದೂರುದಾರರ ಪರ ವಕೀಲರು ವಾದಿಸಿ, “ರಿಷಬ್ ಶೆಟ್ಟಿ ಅವರು ಲೈವ್ ಆಗಿ ತಡೆದರೂ ರಣವೀರ್ ನಿಲ್ಲಿಸದೆ ಮಾತನಾಡಿದ್ದಾರೆ. ರಣವೀರ್ ಪತ್ನಿ ದೀಪಿಕಾ ಪಡುಕೋಣೆ ಅವರೇ ಕನ್ನಡಿಯವರಾಗಿದ್ದು, ಅವರು ಕನ್ನಡದ ಸಂಸ್ಕೃತಿಯ ಬಗ್ಗೆ ತಿಳಿದುಕೊಳ್ಳಬೇಕಿತ್ತು” ಎಂದರು.
ಸದ್ಯಕ್ಕೆ ರಣವೀರ್ ಸಿಂಗ್ ವಿರುದ್ಧ ಯಾವುದೇ ಕಠಿಣ ಕ್ರಮ ಜರುಗಿಸದಂತೆ ಮಧ್ಯಂತರ ಆದೇಶ ನೀಡಿದ ಹೈಕೋರ್ಟ್, ವಿಚಾರಣೆಯನ್ನು ಮುಂದಿನ ಸೋಮವಾರಕ್ಕೆ ಮುಂದೂಡಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


