ಬೆಂಗಳೂರು: ರಾಜ್ಯದಲ್ಲಿ ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡದ ಸರ್ಕಾರದ ಧೋರಣೆಯ ವಿರುದ್ಧ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಧಾರವಾಡದಲ್ಲಿ ನಡೆಯುತ್ತಿರುವ ಉದ್ಯೋಗಾಕಾಂಕ್ಷಿಗಳ ಬೃಹತ್ ಪ್ರತಿಭಟನೆಯನ್ನು ಬೆಂಬಲಿಸಿರುವ ಅವರು, “ನಿಮ್ಮೊಂದಿಗೆ ನಾನಿದ್ದೇನೆ” ಎಂದು ಅಭಯ ನೀಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಸುದೀರ್ಘ ಪೋಸ್ಟ್ ಮಾಡಿರುವ ಕುಮಾರಸ್ವಾಮಿ, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದಲ್ಲಿ ಸದ್ಯ 2.94 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇವೆ. ಆದರೆ ಸರ್ಕಾರವು ಸಂಪುಟ ದರ್ಜೆ ಹುದ್ದೆಗಳನ್ನು ಮಾತ್ರ ‘ಸೂಪರ್ ಫಾಸ್ಟ್’ ಆಗಿ ಭರ್ತಿ ಮಾಡುತ್ತಿದೆ ಎಂದು ಅವರು ಲೇವಡಿ ಮಾಡಿದ್ದಾರೆ ಅಲ್ಲದೇ, “ನಿರುದ್ಯೋಗ ಎಂಬುದು ಸದಾ ಕುದಿಯುವ ಜ್ವಾಲಾಮುಖಿ. ಇದನ್ನು ಸರ್ಕಾರ ಲಘುವಾಗಿ ಪರಿಗಣಿಸಬಾರದು. ಕಾಲಕಾಲಕ್ಕೆ ನೇಮಕಾತಿ ಮಾಡದೆ ನಿರ್ಲಕ್ಷಿಸಿದ್ದರ ಫಲವಾಗಿಯೇ ಇಂದು ಯುವಜನರು ಬೀದಿಗೆ ಇಳಿದಿದ್ದಾರೆ” ಎಂದು ಎಚ್ಚರಿಸಿದ್ದಾರೆ.
ಶಿಕ್ಷಣ, ಆರೋಗ್ಯ ಮತ್ತು ಪೊಲೀಸ್ ಇಲಾಖೆಗಳಲ್ಲಿ ಅತಿ ಹೆಚ್ಚು ಹುದ್ದೆಗಳು ಖಾಲಿ ಇವೆ. ಬೆಂಗಳೂರಿನ 18 ಪ್ರಮುಖ ಪೊಲೀಸ್ ಠಾಣೆಗಳಲ್ಲಿ ಇನ್ಸ್‌ಪೆಕ್ಟರ್ ಗಳೇ ಇಲ್ಲದಿರುವುದು ಆಡಳಿತದ ಕುಸಿತಕ್ಕೆ ಸಾಕ್ಷಿ. ವರ್ಗಾವಣೆ ದಂಧೆಯಲ್ಲಿ ಮುಳುಗಿರುವ ಸರ್ಕಾರಕ್ಕೆ ಯುವಕರ ದನಿ ಕೇಳುತ್ತಿಲ್ಲ ಎಂದು ಅವರು ಟೀಕಿಸಿದ್ದಾರೆ.
ಕೂಡಲೇ ವಿಧಾನಸೌಧದ 3ನೇ ಮಹಡಿಯಿಂದ ಕೆಳಗಿಳಿದು ಬಂದು ಯುವಜನರ ಅಹವಾಲು ಆಲಿಸಬೇಕು ಮತ್ತು ಖಾಲಿ ಹುದ್ದೆಗಳ ಭರ್ತಿಗೆ ತುರ್ತು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಕಾಂಗ್ರೆಸ್ ಸರ್ಕಾರ ಯುವಜನರ ಆಕ್ರೋಶಕ್ಕೆ ಬೆಲೆ ತೆರಬೇಕಾಗುತ್ತದೆ ಎಂದು ಎಚ್ ಡಿಕೆ ಎಚ್ಚರಿಸಿದ್ದಾರೆ.
ಅಂತಿಮವಾಗಿ, ಪ್ರತಿಭಟನಾಕಾರರಿಗೆ ಶಾಂತಿಯುತವಾಗಿ ಹೋರಾಟ ನಡೆಸುವಂತೆ ಮನವಿ ಮಾಡಿರುವ ಅವರು, ಉದ್ಯೋಗಾಕಾಂಕ್ಷಿಗಳ ನ್ಯಾಯಯುತ ಬೇಡಿಕೆಗಳಿಗೆ ತಾವು ಸದಾ ಬೆಂಬಲವಾಗಿರುವುದಾಗಿ ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


