ಶಿವಮೊಗ್ಗ : ಸರ್ಕಾರದ ಸೌಲಭ್ಯ ಪಡೆದುಕೊಳ್ಳುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಹಕ್ಕು ಮತ್ತು ಕರ್ತವ್ಯವಾಗಿದೆ, ಸರ್ಕಾರ ನೀಡಿರುವ ಯುವನಿಧಿ ಯೋಜನೆಯಂತಹ ಸೌಲಭ್ಯ ಸವಲತ್ತು ಪಡೆದುಕೊಂಡು ಸದ್ಬಳಕೆಮಾಡಿಕೊಳ್ಳಿ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷರಾದ ಸಿ.ಎಸ್. ಚಂದ್ರಭೂಪಾಲ್ ಹೇಳಿದರು.
ಅವರು ಇಂದು ಕೈಗಾರಿಕ ತರಬೇತಿ ಇಲಾಖೆ ಮತ್ತು ಉದ್ಯೋಗ ಇಲಾಖೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಸಹ್ಯಾದ್ರಿ ಪ್ರಥಮ ದರ್ಜೆ ವಿಜ್ಞಾನ ಕಾಲೇಜು ಮತ್ತು ಜಿಲ್ಲಾ ಗ್ಯಾರಂಟಿ ಪ್ರಾಧಿಕಾರ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಸಹ್ಯಾದ್ರಿ ಪ್ರಥಮ ದರ್ಜೆ ವಿಜ್ಞಾನ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ಯುವನಿಧಿ ಯೋಜನೆಯ ಪ್ರಚಾರ ಕಾರ್ಯಕ್ರಮ ಉದ್ಘಾಟಿಸಿ ಪೊಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದರು.
ಇಚ್ಚಾಶಕ್ತಿಯಿಂದ ವಿದ್ಯಾರ್ಥಿಗಳು ವಿದ್ಯ್ಯಾಭ್ಯಾಸ ಮತ್ತು ಉದ್ಯೋಗದ ಮೇಲೆ ಗಮನಹರಿಸಿ ಯೋಜನೆ ಸದುಪಯೋಗ ಪಡೆದುಕೊಂಡು ಪೋಷಕರ ಆಸೆಗಳನ್ನು ಇಡೇರಿಸಬೇಕು. ಕೌಶಲ್ಯಾಭಿವೃದ್ಧಿ ತರಬೇತಿ ಪಡೆಯುವಾಗ ವಿದ್ಯಾರ್ಥಿಗಳಿಗೆ ಬರುವ ಯುವನಿಧಿ ಹಣಕ್ಕೆ ಯಾವುದೇ ಅಡ್ಡಿಯಾಗುವುದಿಲ್ಲವಾದ್ದರಿಂದ ಆತಂಕ ಪಡಬೇಕಾಗದ ಅವಶ್ಯಕತೆ ಇಲ್ಲಾ ಎಂದು ಅವರು ಹೇಳಿದರು.
ಸರ್ಕಾರವು ಪದವಿ ಮುಗಿಸಿದ ವಿದ್ಯಾರ್ಥಿಗಳಿಗೆ ಉದ್ಯೋಗ ಹುಡುಕಲು ಸಹಕಾರಿಯಾಗಲಿ ಎಂಬ ಉದ್ದೇಶದಿಂದ 2 ವರ್ಷ ಅವಧಿವರೆಗೆ ಯುವನಿಧಿ ಯೋಜನೆಯಡಿ ಎಲ್ಲಾ ವಿದ್ಯಾರ್ಥಿಗಳು ಪದವಿ ಮುಗಿದ ತಕ್ಷಣ ಗ್ರಾಮ್ ಒನ್, ಕರ್ನಾಟಕ ಒನ್, ಮೂಲಕ ಅರ್ಜಿ ಸಲ್ಲಿಸಿದ 6 ತಿಂಗಳ ನಂತರ ಪ್ರತಿ ತಿಂಗಳು ರೂ. 3000 ಹಣವನ್ನು ಯಾವುದೇ ಮಧ್ಯವರ್ತಿ ಇಲ್ಲದೇ ಖಾತೆಗೆ ನೇರವಾಗಿ ವರ್ಗಾವಣೆಯಾಗುತ್ತದೆ ಎಂದರು.
ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷರಾದ ಮಧು ಹೆಚ್.ಎಂ. ಮಾತನಾಡಿ, ಪದವಿ ಮುಗಿಸಿ ಉದ್ಯೋಗ ಪಡೆಯುವಂತ ಯುವಕರಿಗೆ ಸರ್ಕಾರ ನೀಡುವ ಯುವನಿಧಿಯಿಂದ ಬರುವಂತ ರೂ.3000 ಸಹಾಯಧನ ಅತ್ಯಮೂಲ್ಯವಾಗಲಿದೆ ಹಾಗೂ ಸರ್ಕಾರ ನೀಡಿರುವ ಈ ಯೋಜನೆಗಳ ಸದುಪಯೋಗ ಪಡೆದು ಉನ್ನತ ವಿದ್ಯಾಭ್ಯಾಸಕ್ಕೆ ಒತ್ತು ನೀಡಿ. ಪದವಿ ಮುಗಿಸಿದ ನಂತರ ಉದ್ಯೋಗ ಪಡೆಯುವ ತನಕ ಜೀವನಕ್ಕೆ ಯುವನಿಧಿ ಸಹಾಯಕವಾಗಿದೆ ಎಂದರು.
ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ಸುರೇಶ ಮಾತನಾಡಿ ವಿದ್ಯಾರ್ಥಿಗಳು ತಮ್ಮದೇ ಆದಂತ ಕೌಶಲ್ಯ ಬೆಳೆಸಿಕೊಂಡು ಉದ್ಯೋಗವನ್ನು ಪಡೆದುಕೊಳ್ಳಿ, ಕೌಶಲ್ಯಾಭಿವೃದ್ದಿಯಲ್ಲಿ ಯುವನಿಧಿಯ ಎಲ್ಲಾ ಫಲಾನುಭವಿಗಳಿಗೆ ಉಚಿತ ತರಬೇತಿ ನೀಡಲಾಗುತ್ತಿದ್ದು, ಅದರ ಸದ್ಬಳಕೆ ಪಡೆದುಕೊಳ್ಳಿ. ಕೌಶಲ್ಯವು ವಿದ್ಯಾರ್ಥಿಗಳಿಗೆ ಉದ್ಯೋಗ ಪಡೆಯಲು ಮುಖ್ಯವಾಗುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ವೆಬ್ ಡಿಸೈನಿಂಗ್, ಡಾಟಾ ಎಂಟ್ರಿ ಇವುಗಳಿಗೆ ತುಂಬಾ ಬೇಡಿಕೆಯಿದೆ. ಆದ್ದರಿಂದ ವಿದ್ಯಾರ್ಥಿಗಳು ಕಂಪ್ಯೂಟರ್ ಜ್ಞಾನ ಬೆಳೆಸಿಕೊಳ್ಳಿ ಎಂದರು.
ಉದ್ಯೋಗ ಇಲಾಖೆಯ ಉದ್ಯೋಗ ಅಧಿಕಾರಿಗಳಾದ ಮಂಜುನಾಥ ಮಾತನಾಡಿ, ಯುವನಿಧಿಯಡಿಯಲ್ಲಿ ಒಟ್ಟು 57258 ಫಲಾನುಭವಿಗಳಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿ 11569 ಅಭ್ಯರ್ಥಿ ಯುವನಿಧಿ ಹಣ ನೊಂದಾಯಿಸಿಕೊಂಡಿದ್ದಾರೆ. ಒಟ್ಟು ರೂ.29,04,20,100/- ಹಣ ಶಿವಮೊಗ್ಗ ಜಿಲ್ಲೆಯ ಯುವನಿಧಿ ಫಲಾನುಭವಿಗಳಿಗೆ ನೇರವಾಗಿ ವರ್ಗಾವಣೆಯಾಗಿದೆ ಎಂದರು. ಪದವಿಧರರಿಗೆ ರೂ, 3000 ಡಿಪ್ಲೋಮಾ ವಿದ್ಯಾರ್ಥಿಗಳಿಗೆ ರೂ.1500 ಯುವನಿಧಿಯಡಿ ಸಹಾಯಧನ ನೀಡಲಾಗುತ್ತದೆ, ಪದವಿ ವಿದ್ಯಾರ್ಥಿಗಳು ತಮ್ಮ ಫಲಿತಾಂಶ ಬಂದು ಅರ್ಜಿ ಸಲ್ಲಿಸಿದ 180 ದಿನಗಳೊಳಗೆ ಯುವನಿಧಿ ಹಣ ಪಡೆದುಕೊಳ್ಳಬಹುದು. ಅರ್ಜಿ ಸಲ್ಲಿಸುವಾಗ ಸಮಸ್ಯೆ ಕಂಡು ಬಂದಾಗ ಜಿಲ್ಲಾ ಗ್ಯಾರಂಟಿ ಅಡಿಯಲ್ಲಿ ದೂರನ್ನು ನೀಡಬಹುದು ಎಂದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆ ಪ್ರಾಧಿಕಾರದ ಸದಸ್ಯರಾದ ಜಯಪ್ಪ, ಜಿಲ್ಲಾ ಕೌಶಲ್ಯಭಿವೃದ್ದಿ ಅಧಿಕಾರಿ ಸುರೇಶ, ಉದ್ಯೋಗ ಇಲಾಖೆಯ ಉದ್ಯೋಗ ಅಧಿಕಾರಿಗಳಾದ ಮಂಜುನಾಥ, ಸಹ್ಯಾದ್ರಿ ಕಾಲೇಜಿನ ಪ್ರಾಂಶುಪಾಲರಾದ ರಾಜೇಶ್ವರಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


