ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ತಮ್ಮ ನಡುವಿನ ಬಾಂಧವ್ಯದ ಕುರಿತು ಹಬ್ಬಿರುವ ಊಹಾಪೋಹಗಳಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ. “ನಮ್ಮಿಬ್ಬರ ನಡುವಿನ ಸಂಬಂಧ ಹಾಲು ಮತ್ತು ಜೇನಿನಂತೆ ಅತ್ಯಂತ ಮಧುರವಾಗಿದೆ,” ಎಂದು ಅವರು ಹೇಳಿದ್ದಾರೆ.
2023ರ ಚುನಾವಣೆಯಲ್ಲಿ ಮಾತ್ರವಲ್ಲದೆ, ಮುಂದಿನ 2028ರ ಚುನಾವಣೆಯಲ್ಲೂ ನಮ್ಮಿಬ್ಬರ ಸಂಬಂಧ ಇದೇ ರೀತಿ ಮುಂದುವರಿಯಲಿದೆ ಎಂದು ಡಿ.ಕೆ. ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಿಎಂ ಹೇಳಿಕೆಗೆ ಬೆಂಬಲ: “ನಮ್ಮ ಮಧ್ಯೆ ಹುಳಿ ಹಿಂಡಿ ಶಿವಕುಮಾರ್ ನನ್ನು ಒಲಿಸಿಕೊಳ್ಳುವ ಪ್ರಯತ್ನ ನಡೆಸುವವರದ್ದು ಹಗಲುಗನಸು” ಎಂಬ ಮುಖ್ಯಮಂತ್ರಿಗಳ ಹೇಳಿಕೆಯನ್ನು ಡಿ.ಕೆ.ಶಿ ಎತ್ತಿ ಹಿಡಿದಿದ್ದಾರೆ. ಸಿದ್ದರಾಮಯ್ಯ ಅವರು ಅನುಭವದಿಂದ ಈ ಮಾತನ್ನು ಹೇಳಿದ್ದಾರೆ ಎಂದು ಅವರು ತಿಳಿಸಿದರು.
“ನಾನು ಸಿದ್ದರಾಮಯ್ಯ ಅವರನ್ನು ಅವರು ಬೇರೆ ಪಕ್ಷದಲ್ಲಿದ್ದಾಗಿನಿಂದಲೂ ನೋಡುತ್ತಿದ್ದೇನೆ. ಅವರು ಕಾಂಗ್ರೆಸ್ ಗೆ ಬಂದ ನಂತರವಂತೂ ಬಹಳ ಹತ್ತಿರದಿಂದ ನನ್ನನ್ನು ಗಮನಿಸಿದ್ದಾರೆ. ನಾನೇನು ಎಂಬುದು ಅವರಿಗೆ ಚೆನ್ನಾಗಿ ಗೊತ್ತಿದೆ,” ಎಂದು ಡಿಸಿಎಂ ಮಾರ್ಮಿಕವಾಗಿ ನುಡಿದರು.
ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ನಿಮ್ಮನ್ನು ಸೆಳೆಯಲು ಪ್ರಯತ್ನಿಸುತ್ತಿವೆಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, “ಈ ಬಗ್ಗೆ ಮುಂದೊಂದು ದಿನ ನಾನು ಪುಸ್ತಕ ಬರೆದಾಗ ಎಲ್ಲವನ್ನೂ ವಿವರವಾಗಿ ತಿಳಿಸುತ್ತೇನೆ,” ಎಂದು ಕುತೂಹಲಕಾರಿ ಉತ್ತರ ನೀಡಿದರು.
ಫೋನ್ ಟ್ಯಾಪಿಂಗ್ ಆರೋಪ ಹಾಗೂ ರಾಜಕೀಯ ಬೆಳವಣಿಗೆಗಳ ನಡುವೆ ಸಿಎಂ ಮತ್ತು ಡಿಸಿಎಂ ಇಬ್ಬರೂ ತಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂಬ ಸಂದೇಶವನ್ನು ಈ ಮೂಲಕ ರವಾನಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


