ಕೊರಟಗೆರೆ: ತುಮಕೂರು ಜಿಲ್ಲೆಯ ಕೊರಟಗೆರೆ ಪಟ್ಟಣ ಪಂಚಾಯಿತಿಯನ್ನು ಸರ್ಕಾರವು ಪುರಸಭೆಯಾಗಿ ಮೇಲ್ದರ್ಜೆಗೇರಿಸಿದ್ದು, ಈ ಸಂಬಂಧ ವಾರ್ಡ್‌ಗಳ ಮರು ವಿಂಗಡಣೆ ಪ್ರಕ್ರಿಯೆ ಪೂರ್ಣಗೊಂಡಿದೆ. ಈ ಬದಲಾವಣೆಯಿಂದಾಗಿ ಪಟ್ಟಣದ ವಾರ್ಡ್‌ಗಳ ಸಂಖ್ಯೆ 15ರಿಂದ 23ಕ್ಕೆ ಏರಿಕೆಯಾಗಿದೆ.
ಈ ಹಿಂದೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 14,000 ಜನಸಂಖ್ಯೆ ಇತ್ತು. ಈಗ ಸುತ್ತಮುತ್ತಲಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರದೇಶಗಳನ್ನು ಸೇರ್ಪಡೆಗೊಳಿಸಿರುವುದರಿಂದ ಒಟ್ಟು ಜನಸಂಖ್ಯೆ 26,530ಕ್ಕೆ ಏರಿಕೆಯಾಗಿದೆ. ಹೊಸದಾಗಿ 8 ವಾರ್ಡ್‌ಗಳನ್ನು ರಚಿಸಲಾಗಿದ್ದು, ಒಟ್ಟು ವಾರ್ಡ್‌ಗಳ ಸಂಖ್ಯೆ 23 ತಲುಪಿದೆ.
ಸೇರ್ಪಡೆಯಾದ ಪ್ರದೇಶಗಳು:
ಹಳೆಯ 15 ವಾರ್ಡ್‌ಗಳನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಂಡು, ಹೊಸ ವಾರ್ಡ್‌ಗಳಿಗಾಗಿ ಜಟ್ಟಿ ಅಗ್ರಹಾರ, ಹುಲಿಕುಂಟೆ ಮತ್ತು ಹಂಚಿಹಳ್ಳಿ ಗ್ರಾಮ ಪಂಚಾಯಿತಿಗಳ ಕೆಲವು ಭಾಗಗಳನ್ನು ಪುರಸಭೆ ವ್ಯಾಪ್ತಿಗೆ ಸೇರಿಸಲಾಗಿದೆ. 16ನೇ ವಾರ್ಡ್‌ನಿಂದ ಹಿಡಿದು 23ನೇ ವಾರ್ಡ್‌ವರೆಗೆ ಹೊಸ ಪ್ರದೇಶಗಳನ್ನು ಹಂಚಿಕೆ ಮಾಡಲಾಗಿದ್ದು, ಇದರಲ್ಲಿ ದೇವರಹಳ್ಳಿ, ಕಾಮೇನಹಳ್ಳಿ, ಅಗ್ನಿಶಾಮಕ ಠಾಣೆ ಪ್ರದೇಶ, ಓಬಳದೇವರಹಳ್ಳಿ, ಕಣ್ವ ಲೇಔಟ್, ಮಲ್ಲೇಶಪುರ ಸೇರಿದಂತೆ ಹಲವು ಬಡಾವಣೆಗಳು ಸೇರಿವೆ.
ಸ್ಥಳೀಯರ ಆಕ್ಷೇಪ ಮತ್ತು ಗೊಂದಲ:
ಪುರಸಭೆಯಾಗಿ ಮೇಲ್ದರ್ಜೆಗೇರಿರುವುದು ಸಂತಸ ತಂದಿದ್ದರೂ, ವಾರ್ಡ್‌ಗಳ ವಿಂಗಡಣೆಯಲ್ಲಿ ತಾಂತ್ರಿಕ ನ್ಯೂನತೆಗಳಿವೆ ಎಂಬ ಆರೋಪ ಕೇಳಿಬಂದಿದೆ. ಪ್ರಮುಖ ರಸ್ತೆ ಮತ್ತು ನೈಸರ್ಗಿಕ ಗಡಿಗಳನ್ನು ಪರಿಗಣಿಸದೆ ವಾರ್ಡ್ ವಿಂಗಡಣೆ ಮಾಡಲಾಗಿದೆ. ಕೆಲವು ವಾರ್ಡ್‌ಗಳ ನಡುವಿನ ಭೌಗೋಳಿಕ ಅಂತರ ಹೆಚ್ಚಿದ್ದು, ಆಡಳಿತಾತ್ಮಕವಾಗಿ ಸಮಸ್ಯೆ ಉಂಟಾಗಬಹುದು. ಜನಸಂಖ್ಯೆ ಮತ್ತು ಪ್ರದೇಶದ ಸಮಾನ ಹಂಚಿಕೆಯಾಗಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.
ಪಟ್ಟಣವು ಪುರಸಭೆಯಾಗಿರುವುದರಿಂದ ಸರ್ಕಾರದಿಂದ ಹೆಚ್ಚಿನ ಅನುದಾನ ಬಿಡುಗಡೆಯಾಗುವ ನಿರೀಕ್ಷೆಯಿದೆ. ಇದರಿಂದ ರಸ್ತೆ, ಕುಡಿಯುವ ನೀರು, ಒಳಚರಂಡಿ ಸೇರಿದಂತೆ ಮೂಲ ಸೌಕರ್ಯಗಳ ಅಭಿವೃದ್ಧಿಗೆ ವೇಗ ಸಿಗಲಿದೆ ಎಂದು ಸ್ಥಳೀಯರು ಆಶಾಭಾವನೆ ವ್ಯಕ್ತಪಡಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


