ಬಾಗಲಕೋಟೆ: ಸೋಮಣ್ಣ ಬಿಜೆಪಿಯಲ್ಲಿ ಕೆಲಸವಿಲ್ಲದಿರುವ ಮಂತ್ರಿ. ಅವರಿಗೆ ಯಾವ ಕಡತವೂ ಹೋಗುವುದಿಲ್ಲ. ಅವರಿಗೆ ಪ್ರಚಾರ ಮಾಡಲು ಸಮಯವಿಲ್ಲ ಎಂದಲ್ಲ, ಕ್ಷೇತ್ರದಲ್ಲಿ ಸೋಲುತ್ತೇವೆ ಎಂದು ತಿಳಿದಿರುವುದರಿಂದ ಹೆಚ್ಚು ಪ್ರಚಾರ ಮಾಡುತ್ತಿಲ್ಲ ಅಷ್ಟೆ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಬಾಗಲಕೋಟೆಯಲ್ಲಿ ಕೇಂದ್ರ ಸಚಿವ, ತುಮಕೂರು ಸಂಸದ ವಿ.ಸೋಮಣ್ಣ ಪ್ರಚಾರ ನಡೆಸುತ್ತಿರುವ ಸಂದರ್ಭದಲ್ಲಿ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಅವರ ಮಾತಿನಲ್ಲಿ ಸತ್ಯವಿಲ್ಲ ಹಾಗೂ ಹೇಳಿದಂತೆ ನಡೆದುಕೊಳ್ಳುತ್ತಿಲ್ಲವಾದ್ದರಿಂದ ಅವರ ಬಗ್ಗೆ ಹೆಚ್ಚು ಪ್ರತಿಕ್ರಿಯೆ ನೀಡಲು ನನಗೆ ಇಷ್ಟವಿಲ್ಲ ಎಂದರು.
ಬಾಗಲಕೋಟೆ ಕ್ಷೇತ್ರದಲ್ಲಿ ಬಿಜೆಪಿ ಸೋಲುತ್ತಿದೆ ಎಂಬ ಭಯದಿಂದ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಪಕ್ಷದಿಂದ ಉಚ್ಛಾಟಿಸಲ್ಪಟ್ಟಿರುವ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನೇ ಗೋಗರೆದು ಕರೆ ತಂದು ಪ್ರಚಾರ ಕಾರ್ಯಕ್ಕೆ ಇಳಿಸಿದ್ದಾರೆ. ಇದು ಅವರ ದ್ವಂದ್ವ ನೀತಿ, ಕರ್ನಾಟಕದಲ್ಲಿ ಬಿಜೆಪಿ ಎಂಥಾ ಹೀನಾಯ ಸ್ಥಿತಿಯಲ್ಲಿದೆ ಎಂಬುದಕ್ಕಿದು ಸಾಕ್ಷಿ ಅಂತ ಅವರು ತಿರುಗೇಟು ನೀಡಿದರು.
ಕೇಂದ್ರ ಸರ್ಕಾರ ಗ್ಯಾಸ್ ಸಿಲಿಂಡರ್ ಪೂರೈಕೆ ಬಗ್ಗೆ ಕ್ರಮ ಕೈಗೊಳ್ಳಬೇಕು. ಅದು ಅವರ ಕರ್ತವ್ಯ. ರಾಜ್ಯ ಸರ್ಕಾರ ವಿತರಣೆ ಮಾಡುತ್ತದೆಯಷ್ಟೇ. ಆಟೋ ಚಾಲಕರು ಆಹಾರ ಸಚಿವರ ಮನೆಗೆ ಮುತ್ತಿಗೆ ಹಾಕುವುದಾಗಿ ಹೇಳುತ್ತಿದ್ದಾರೆ, ಆದರೆ ಇವರು ನಿಜವಾಗಿ ನರೇಂದ್ರ ಮೋದಿಯವರ ಮನೆಗೆ ಮುತ್ತಿಗೆ ಹಾಕಬೇಕು ಎಂದರು.
ರಾಜ್ಯದ ಬಜೆಟ್ ನಲ್ಲಿ ಅಲ್ಪಸಂಖ್ಯಾತರಿಗೆ ಹೆಚ್ಚಿನ ಅನುದಾನ ನೀಡಲಾಗಿದೆ ಎಂಬ ಯತ್ನಾಳ್ ಅವರ ಮಾತು ದ್ವೇಷ ರಾಜಕೀಯದಿಂದ ಕೂಡಿದ್ದು. ಅಲ್ಪಸಂಖ್ಯಾತರು ಈ ರಾಜ್ಯದ ನಾಗರಿಕರಲ್ಲವೇ? ಅವರ ಜನಸಂಖ್ಯೆ 14% ರಷ್ಟಿದ್ದು ಎಲ್ಲರಿಗೂ ಅನುದಾನ ನೀಡಿದಂತೆ ಅವರಿಗೂ ನೀಡಲಾಗಿದೆ ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


