ತುಮಕೂರು: ಏಪ್ರಿಲ್ 1ರಿಂದ ಆರಂಭವಾಗಿರುವ ಸ್ವಯಂ ಗಣತಿಯಲ್ಲಿ ಸರ್ವಜನಿಕರು ಭಾಗವಹಿಸುವ ಮೂಲಕ ಅಭಿವೃದ್ಧಿಗೆ ಕೈಜೋಡಿಸಬೇಕೆಂದು ಜಿಲ್ಲಾಧಿಕಾರಿ ಶುಭಕಲ್ಯಾಣ್ ಕರೆ ನೀಡಿದ್ದಾರೆ.
ತುಮಕೂರು ನಗರದ ವಿವಿಧ ಬಡಾವಣೆಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಅವರು ಮೊಬೈಲ್ ಮೂಲಕ ನಾಗರಿಕರು ಸ್ವಯಂ ಗಣತಿ ಮಾಡುವುದು ಹೇಗೆ ಎಂಬುದನ್ನು ಖುದ್ದು ತಿಳಿಸಿಕೊಟ್ಟರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರತಿ ಹತ್ತು ವರ್ಷಗಳಿಗೊಮ್ಮೆ ಭಾರತ ಸರ್ಕಾರ ಜನಗಣತಿ ಮಾಡುತ್ತದೆ. ಅಂತೆಯೇ ಇದೀಗ 2027 ರ ಜನಗಣತಿ ಏಪ್ರಿಲ್ 1ರಿಂದ ಆರಂಭವಾಗಿದ್ದು ಏಪ್ರಿಲ್ 15 ರವರೆಗೆ ಸ್ವಯಂ ಗಣತಿ ನಂತರ ಗಣತಿದಾರರು ಮನೆ ಮನೆಗೆ ಭೇಟಿ ನೀಡಿ ಗಣತಿ ಕಾರ್ಯ ಮಾಡಲಿದ್ದಾರೆ ಎಂದರು.
ದೇಶದ ಅಭಿವೃದ್ಧಿ ದೃಷ್ಟಿಯಿಂದ ಗಣತಿ ಕಾರ್ಯದ ಪ್ರಮುಖ ಪಾತ್ರವಿದೆ ಎಂದ ಅವರು, ಜನಸಂಖ್ಯೆ ಮಾಹಿತಿ ಪಡೆದು ಅದಕ್ಕನುಗುಣವಾಗಿ ಜನರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳನುಸಾರ ನೀತಿಗಳನ್ನು ರೂಪಿಸಲು ಗಣತಿ ಅಂಕಿಸಂಖ್ಯೆಗಳು ಮುಖ್ಯವಾಗಿವೆ. ಈ ಹಿನ್ನೆಲೆಯಲ್ಲಿ ದೇಶದ ಎಲ್ಲ ಜನರು ಜನಗಣತಿಯಲ್ಲಿ ಪಾಲ್ಗೊಳ್ಳಬೇಕಿದೆ ಎಂದರು.
ಪ್ರಸ್ತುತ ಏಪ್ರಿಲ್ 1ರಿಂದ 15 ರವರೆಗೆ ಸ್ವಯಂ ಗಣತಿ ಆರಂಭವಾಗಿದ್ದು ಸರ್ವಜನಿಕರು ತಮ್ಮ ಮೊಬೈಲ್ ಮೂಲಕ ವಿವರಗಳನ್ನು ದಾಖಲಿಸಬೇಕಿದೆ. ಈ ದಾಖಲೆಗಳು ಅತ್ಯಂತ ಗೌಪ್ಯವಾಗಿರಿಸಲಾಗುವುದು ಮತ್ತು ಇದು ಸರ್ಕಾರದ ಯೋಜನೆಗಳ ರೂಪಿಸುವ ಉದ್ದೇಶಕ್ಕೆ ಮಾತ್ರ ಬಳಕೆ ಆಗಲಿದೆ ಎಂದರು.
ತುಮಕೂರು ಮಹಾನಗರ ಪಾಲಿಕೆ ಆಯುಕ್ತ ಶುಭ ಬಿ. ಮಾತನಾಡಿ, ಏಪ್ರಿಲ್ 1 ರಿಂದ ತಮ್ಮ ಸಿಬ್ಬಂದಿ ಗಣತಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಏಪ್ರಿಲ್ 16ರಿಂದ ಗಣತಿದಾರರು ಮನೆ ಮನೆಗೆ ಭೇಟಿ ನೀಡಲಿದ್ದಾರೆ. ಐಡಿ ಕಾರ್ಡ್‌ನೊಂದಿಗೆ ಅವರು ಬರಲಿದ್ದಾರೆ ಅದನ್ನು ಪರಿಶೀಲಿಸಿ ಗಣತಿಗೆ ಮಾಹಿತಿ ನೀಡಬೇಕು ಎಂದರು. ಈ ವೇಳೆ ಉಪರ ಜಿಲ್ಲಾಧಿಕಾರಿ ಡಾ.ಎನ್.ಶಿವಪ್ಪಸ್ವಾಮಿ ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


