ರಾಮನಗರ: ರಾಜ್ಯದಲ್ಲಿ ಎದುರಾಗಿರುವ ಗ್ಯಾಸ್ ಅಭಾವವನ್ನು ಬಗೆಹರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಹಿರಿಯ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಇಂದು ಪ್ರತಿಭಟನೆ ನಡೆಸಿದರು.
ರಾಮನಗರದ ಐಜೂರು ವೃತ್ತದಲ್ಲಿ ಜಮಾಯಿಸಿದ ವಾಟಾಳ್ ನಾಗರಾಜ್, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ತಮಟೆ ಬಾರಿಸುವ ಮೂಲಕ ವಿನೂತನವಾಗಿ ಆಕ್ರೋಶ ವ್ಯಕ್ತಪಡಿಸಿದರು.
ಗ್ಯಾಸ್ ಸಮಸ್ಯೆ ನೀಗಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಪೂರ್ಣವಾಗಿ ವಿಫಲವಾಗಿವೆ. ಆಡಳಿತ ಮತ್ತು ವಿರೋಧ ಪಕ್ಷಗಳು ಕೇವಲ ಉಪಚುನಾವಣೆಯಲ್ಲಿ ಮಗ್ನವಾಗಿವೆ ಎಂದು ವಾಟಾಳ್ ಕಿಡಿಕಾರಿದರು.
ಗ್ಯಾಸ್ ಸಿಗದೆ ಆಟೋ ಚಾಲಕರು ಮತ್ತು ಹೋಟೆಲ್ ಮಾಲೀಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಬಂಕ್‌ಗಳ ಮುಂದೆ ಗಂಟೆಗಟ್ಟಲೆ ಕಾದರೂ ಗ್ಯಾಸ್ ಸಿಗುತ್ತಿಲ್ಲ. ಕೂಡಲೇ ಸಮಸ್ಯೆ ಬಗೆಹರಿಸದಿದ್ದರೆ ಆಟೋ ಚಾಲಕರೊಂದಿಗೆ ಸೇರಿ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಒಂದು ಕಡೆ ಯುದ್ಧದ ವಾತಾವರಣ ಮತ್ತು ಬೆಲೆ ಏರಿಕೆಯಿಂದ ಜನರು ಸಂಕಷ್ಟದಲ್ಲಿದ್ದರೆ, ಮತ್ತೊಂದೆಡೆ ಐಪಿಎಲ್ ಪಂದ್ಯಾವಳಿಗಳನ್ನು ಆಯೋಜಿಸಲಾಗುತ್ತಿದೆ. ಕಾರ್ಪೊರೇಟ್ ಸಂಸ್ಥೆಗಳಿಗಾಗಿ ಸರ್ಕಾರ ಇಂತಹ ಕ್ರೀಡೆಗಳಿಗೆ ಆದ್ಯತೆ ನೀಡುತ್ತಿದೆ ಎಂದು ಅವರು ಟೀಕಿಸಿದರು.
ಇತ್ತೀಚೆಗೆ ಐಪಿಎಲ್ ವಿಜಯೋತ್ಸವದ ವೇಳೆ ಮೃತಪಟ್ಟ 11 ಜನರ ಕುಟುಂಬಗಳಿಗೆ ಯಾವುದೇ ತಂಡಗಳು ಸೂಕ್ತ ಪರಿಹಾರ ನೀಡಿಲ್ಲ. ಅಮಾನವೀಯವಾಗಿ ನಡೆಯುತ್ತಿರುವ ಐಪಿಎಲ್ ಪಂದ್ಯಾವಳಿಗಳನ್ನು ಕೂಡಲೇ ನಿಲ್ಲಿಸಬೇಕು ಎಂದು ಅವರು ಆಗ್ರಹಿಸಿದರು.
ರಾಜ್ಯದಲ್ಲಿ ಎದುರಾಗಿರುವ ಗ್ಯಾಸ್ ತುರ್ತು ಪರಿಸ್ಥಿತಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ವಾಟಾಳ್ ನಾಗರಾಜ್ ಈ ಸಂದರ್ಭದಲ್ಲಿ ಒತ್ತಾಯಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


