ಶಿರಾ: ಬಿಸಿಲಿನ ಬೇಗೆಯಲ್ಲೂ ಕೂಡ ಹಾಲು ಉತ್ಪಾದನೆಯಲ್ಲಿ ರಾಜ್ಯದಲ್ಲಿ ತುಮಕೂರು ಜಿಲ್ಲೆ ಹೆಚ್ಚು ಹಾಲು ಉತ್ಪಾದನೆ ಮಾಡಿದ ಕೀರ್ತಿ ಪಡೆದರೆ, ಪ್ರತಿದಿನ 82 ಸಾವಿರ ಲೀಟರ್ ಹಾಲು ಉತ್ಪಾದನೆ ಮಾಡುವ ಮೂಲಕ ಶಿರಾದಲ್ಲಿ ಕ್ಷೀರ ಕ್ರಾಂತಿಯೇ ಆರಂಭವಾಗಿದೆ ಎಂದು ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್.ಆರ್.ಗೌಡ ಹೇಳಿದರು.
ಶಿರಾ ನಗರದ ನಂದಿನಿ ಕ್ಷೀರ ಭವನದಲ್ಲಿ ಹಮ್ಮಿಕೊಂಡಿದ್ದ ತಾಲೂಕಿನ 250 ಜನ ಡೈರಿ ಕಾರ್ಯದರ್ಶಿ ಹಾಗೂ ಹಾಲು ಪರೀಕ್ಷಕರಿಗೆ ತಲಾ ಎರಡು ಜೊತೆ ಬಟ್ಟೆ ಹಾಗೂ ಕಾರ್ಯದರ್ಶಿಗಳಿಗೆ ಬ್ಯಾಗ್ ಗಳನ್ನು ವಿತರಿಸಿ ಅವರು ಮಾತನಾಡಿದರು.
ಕೃಷಿ ನೆಲಕಚ್ಚಿದಂತಹ ಸ್ಥಿತಿಯಲ್ಲಿ ರೈತರಿಗೆ ಹೈನುಗಾರಿಕೆ ಆರ್ಥಿಕವಾಗಿ ಸದೃಢರನ್ನಾಗಿ ಮಾಡಿದೆ, ಪ್ರಾಮಾಣಿಕತೆ, ಶ್ರಮ ನಿಮ್ಮದಾದರೆ ಹೈನುಗಾರಿಕೆ ಮತ್ತಷ್ಟು ಲಾಭದಾಯಕವಾಗಲಿದೆ ಈ ನಿಟ್ಟಿನಲ್ಲಿ ಎಲ್ಲಾ ಹಾಲು ಉತ್ಪಾದಕರು, ಉತ್ಪಾದನೆ ಹೆಚ್ಚಳ ಮಾಡಿಕೊಳ್ಳುವತ್ತ ಹೆಚ್ಚು ಗಮನಹರಿಸಬೇಕು. ಜೊತೆಗೆ ಹಾಲು ಉತ್ಪಾದನೆ ಹೆಚ್ಚಳ ಗೊಳಿಸಲು ರೈತರಿಗೆ ಸಲಹೆ ಮತ್ತು ಆಸಕ್ತಿ ಮೂಡುವಂತೆ ಮಾಡಬೇಕು. ಪ್ರತಿದಿನ ಒಂದು ಲಕ್ಷ ಲೀಟರ್ ಹಾಲು ಉತ್ಪಾದನೆ ನಮ್ಮ ಸಂಕಲ್ಪವಾಗಿದ್ದು, ಹಾಲಿನ ಉತ್ಪಾದನೆ ಹೆಚ್ಚಳ ಗೊಳಿಸಿಕೊಳ್ಳುವ ನಿಟ್ಟಿನಲ್ಲಿ ತಾಲೂಕಿನಲ್ಲಿ 12 ಹಾಲು ಶೇಖರಣೆ ಉಪಕೇಂದ್ರಗಳನ್ನು ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗಿದ್ದು, ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ಡೈರಿ ಸ್ಥಾಪನೆ ಮಾಡಬೇಕೆಂಬ ಉದ್ದೇಶ ನಮ್ಮದಾಗಿದ್ದು ಆಸಕ್ತ ರೈತರು ಡೈರಿ ಸ್ಥಾಪನೆಗೆ ಮುಂದಾದರೆ ಒಕ್ಕೂಟ ಸಹಕಾರ ನೀಡುತ್ತದೆ ಎಂದರು.
ತುಮಕೂರು ಹಾಲು ಒಕ್ಕೂಟದ ಜಿಲ್ಲಾ ವ್ಯವಸ್ಥಾಪಕ ಡಾ.ಟಿ.ವಿ.ಶ್ರೀನಿವಾಸ್ ಮಾತನಾಡಿ, ಶಿರಾ ತಾಲೂಕಿನಲ್ಲಿ ಹಾಲು ಉತ್ಪಾದಕರು ವಿವಿಧ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳುವಲ್ಲಿ ಜಿಲ್ಲೆಗೆ ಮಾದರಿಯಾಗಿದ್ದಾರೆ. ಶಿರಾದಲ್ಲಿ ಹಾಲು ಉತ್ಪಾದನೆ ಬೆಳವಣಿಗೆ ದರ 48ರಷ್ಟಿದ್ದು, ಮುಂದಿನ ದಿನಗಳಲ್ಲಿ ಶಿರಾ ಕ್ಷೀರ ಕ್ರಾಂತಿ ಮಾಡುವಂತ ಹೆಜ್ಜೆ ಇಡುತ್ತಿದೆ ಎಂಬುವುದನ್ನು ಸಾಕ್ಷಿಕರಿಸುತ್ತದೆ ಎಂದರು.
ಉಪ ವ್ಯವಸ್ಥಾಪಕ ಬಿ.ಗಿರೀಶ್ ಮಾತನಾಡಿ, ಇಂತಹ ಬೇಸಿಗೆ ಸಂದರ್ಭದಲ್ಲಿ ತಾಲೂಕಿನಲ್ಲಿ ಹಾಲಿನ ಉತ್ಪಾದನೆ ಹೆಚ್ಚಳ ಕಂಡಿರುವುದು ಉತ್ಪಾದಕರ ಆಸಕ್ತಿ ಮತ್ತು ಇಚ್ಛಾಶಕ್ತಿ ಕಾರಣ. ಪ್ರತಿದಿನ 82 ಸಾವಿರ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, ಅತಿ ಶೀಘ್ರದಲ್ಲಿಯೇ ಪ್ರತಿದಿನ ಒಂದು ಲಕ್ಷ ಲೀಟರ್ ಹಾಲು ಉತ್ಪಾದನೆ ಮಾಡುವತ್ತ ಶಿರಾದಿಟ್ಟ ಹೆಜ್ಜೆ ಇಡಲಿದೆ, ಇದಕ್ಕೆ ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್.ಆರ್ ಗೌಡರವರು ಹಾಗೂ ಉತ್ಪಾದಕರೊಂದಿಗೆ ಹೊಂದಿರುವ ಸ್ನೇಹ ಬಾಂಧವ್ಯವೇ ಕಾರಣ ಎಂದು ತಿಳಿಸಿದರು.
ಸಹಕಾರ ಸಂಘಗಳ ನಿಬಂಧಕ ಓಬಳೇಶ್, ವಿಸ್ತರಣಾಧಿಕಾರಿ ಚೈತ್ರ, ಪಶು ವೈದ್ಯ ಡಾ. ಶ್ರೀಕಾಂತ್, ವಿಸ್ತರಣಾ ಸಮಾಲೋಚಕ ರಾದ ಬಾ.ಬಾ.ಫಕ್ರುದ್ದೀನ್.ಪಿ.ಎಂ, ಪ್ರವೀಣ್, ಹನುಮಂತರಾಯ ಸೇರಿದಂತೆ ಶಿರಾ ತಾಲೂಕಿನ ಎಲ್ಲಾ ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿಗಳು ಹಾಗೂ ಹಾಲು ಪರೀಕ್ಷಕರು ಹಾಜರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


