ಸಿರಾ: ತನ್ನ 29ನೇ ವಯಸ್ಸಿಗೆ ಇಡೀ ಸಾಮ್ರಾಜ್ಯವನ್ನೇ ತ್ಯಜಿಸಿ ಜನರೊಟ್ಟಿಗೆ ಬದುಕು ಕಟ್ಟಿಕೊಳ್ಳಲು ಮುಂದಾದ ಗೌತಮ ಬುದ್ಧನ ನಿರ್ಧಾರಗಳು ಸಾಮಾಜಿಕ ಕಳಕಳಿಯ ಬುತ್ತಿಯಾದರೆ ಸಕ್ಕರ ನಾಗರಾಜ್ ಬರೆದ ಬುದ್ಧ ಕರುಣೆಯ ಹೊತ್ತು ಕವನ ಸಂಕಲನವು ಬುದ್ಧನ ಸಮತೆಯ ಬದುಕನ್ನು ಕಟ್ಟಿಕೊಡುವ ತಾಕತ್ತನ್ನು ಹೊಂದಿದೆ ಎಂದು ಲೇಖಕ ಹಾಗೂ ಚಿಂತಕ ಭುವನಹಳ್ಳಿ ನಾಗರಾಜ್ ಹೇಳಿದರು.
ಅವರು ನಗರದ ನಿವೃತ್ತ ನೌಕರರ ಭವನದಲ್ಲಿ ತಾಲ್ಲೂಕು ಕಸಾಪ, ನಾಡೋಜ ಬರಗೂರು ರಾಮಚಂದ್ರಪ್ಪ ಬಳಗ ಹಾಗೂ ಬುದ್ಧ, ಬಸವ, ಅಂಬೇಡ್ಕರ್ ಸಾಂಸ್ಕೃತಿಕ ಪ್ರತಿಷ್ಠಾನದ ಸಹಯೋಗದಲ್ಲಿ ಭಾನುವಾರ ಲೇಖಕ ಸಕ್ಕರ ನಾಗರಾಜ್ ಅವರ ಬುದ್ಧ ಕರುಣೆಯ ಹೊತ್ತು ಕವನ ಸಂಕಲನ ಲೋಕಾರ್ಪಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕವನ ಸಂಕಲನದ ತಲೆ ಬರಹದಂತೆ ಇಡೀ ಕವಿತೆಗಳ ಸಾಲುಗಳು ಸಮತೆಯ ದೀಪವನ್ನು ಹೊತ್ತಿವೆ ಎಂದು ಭುವನಹಳ್ಳಿ ನಾಗರಾಜ್ ಹೇಳಿದರು.
ಪುಸ್ತಕ ಬಿಡುಗಡೆ ಮಾಡಿದ ಗಂಗಾವತಿ ಸರ್ಕಾರಿ ಪ್ರ.ದ. ಕಾಲೇಜಿನ ಸಹ ಪ್ರಾಧ್ಯಾಪಕಿ ಹಾಗೂ ಲೇಖಕಿ ಡಾ.ಮುಮ್ತಾಜ್ ಬೇಗಂ ಮಾತನಾಡಿ, ನಾನಿಂದು ನನ್ನ ಮಾನಸ ಗುರುಗಳಾದ ಬರಗೂರು ಮೇಷ್ಟ್ರು ಅವರ ಮೂಲ ನೆಲೆಯ ನೆಲದಲ್ಲಿ ನಿಂತು ಮಾತನಾಡುತ್ತಿರುವುದು ನನ್ನ ಪುಣ್ಯ ಎಂದು ಭಾವಿಸಿದ್ದೇನೆ. ಬುದ್ಧನ ವ್ಯಕ್ತಿತ್ವದ ಮೂಲ ಆಧಾರವೇ ಕರುಣೆ. ಇಂದಿನ ವರ್ತಮಾನಕ್ಕೆ ಅಗತ್ಯವಾದ ಮೌಲ್ಯಗಳನ್ನು ಕೃತಿಗಳು ಕಟ್ಟಿಕೊಡಬೇಕು ಎಂದರು.
ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಆಶಾ ಬಗ್ಗನಡು ಅವರ ಕೃತಿ ಕುರಿತು ಮಾತನಾಡುತ್ತಾ, ಸೃಜನಶೀಲತೆ, ಬಂಧ ಇವೆಲ್ಲದರ ಅಚೆ ಸಾಮಾಜಿಕ ಪ್ರಜ್ಞೆ ಇರಬೇಕು. ಆಗ ಬರೆದ ಬರಹಗಳು ಸಾರ್ಥಕವಾಗುತ್ತವೆ. ಯಾವುದೇ ಕೃತಿಗಳು ಸಮಾನತೆಯ ಅಂಧಕಾರ ನೀಗಿ ದಟ್ಟ ಅಡವಿಯೊಳಗೆ ದಾರಿ ತೋರುವ ದೀಪವಾಗಬೇಕು ಎಂದರು.
ಡಾ.ಮುಮ್ತಾಜ್ ಬೇಗಂ, ಲೇಖಕಿ ಮಾತನಾಡಿ, ಸಿತ ಪ್ರಜ್ಞೆತೆ, ತಾಳ್ಮೆಯನ್ನು ಕಳೆದುಕೊಳ್ಳದೆ ಸರಳತೆ, ಸಮಾನತೆ, ಕ್ಷಮಾಗುಣ ಇವೆಲ್ಲವೂ ಕೂಡ ಈ ಹೊತ್ತಿನ ವರ್ತಮಾನದ ಮೌಲ್ಯಗಳಾಗಬೇಕು. ಸಕ್ಕರ ನಾಗರಾಜ್ ಅವರ ಕಾವ್ಯ ಬದುಕಿನ ಒಳನೋಟವನ್ನು ಕೊಟ್ಟಿದೆ ಎಂದು ತಿಳಿಸಿದರು.
ಪ್ರಸ್ತಾವಿಕ ನುಡಿಗಳನ್ನಾಡಿದ ಲೇಖಕ ಡಾ.ತಿಮ್ಮಹಳ್ಳಿ ವೇಣುಗೋಪಾಲ್, ಸಿರಾ ಭಾಗದ ಸಾಹಿತ್ಯಕ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಲೇಖಕ ಸಕ್ಕರ ನಾಗರಾಜ್ ನಿಜಕ್ಕೂ ಕ್ರಿಯಾಶೀಲ ವ್ಯಕ್ತಿ. ಇಂದು ನಾವು ಎದುರಿಸುತ್ತಿರುವ ಸಾಕಷ್ಟು ಸಾಂಸ್ಕೃತಿಕ ಬಿಕ್ಕಟ್ಟುಗಳು, ನಮ್ಮ ನಡುವಿನ ಪಡಿಪಾಡುಗಳ ನಡುವೆ ಸಾಂದರ್ಭಿಕವಾದ ಸಂಕಲನವಿದು ಎಂದರು.
ನಾಡೋಜ ಬರಗೂರು ಮೇಷ್ಟ್ರು ಬಳಗದ ಅಧ್ಯಕ್ಷ ವೈ.ನರೇಶ್ ಬಾಬು, ಸಾಹಿತಿಗಳಾದ ಕರಾವೀರೆನಹಳ್ಳಿ ನಾಗರಾಜು, ಲೇಖಕ ಸಕ್ಕರ ನಾಗರಾಜು, ಸಾಹಿತಿ ಡಿ.ಎಸ್ ಕೃಷ್ಣಮೂರ್ತಿ, ಡಾ.ರಾಮಕೃಷ್ಣ, ಡಾ.ಡಿಎಂ ಗೌಡ, ರೂಪೇಶ್ ಕೃಷ್ಣಯ್ಯ, ಚಲಪತಿ ಸೇರಿದಂತೆ ಅನೇಕ ಪ್ರಮುಖರು ಇದ್ದರು. ಪ್ರಾಧ್ಯಾಪಕ ಶಿವಣ್ಣ ಹೆಂದೋರೆ ಸ್ವಾಗತಿಸಿ, ಜೈರಾಮ್ ಕೃಷ್ಣ ನಿರೂಪಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
