ತುಮಕೂರು: ನಗರದ ರವೀಂದ್ರ ಕಲಾನಿಕೇತನದಲ್ಲಿ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (AIDSO) ತುಮಕೂರು ಜಿಲ್ಲಾ ಸಮಿತಿ ವತಿಯಿಂದ ಮಹಾತ್ಮ ಜ್ಯೋತಿಬಾ ಫುಲೆರವರ 200ನೇ ಜನ್ಮವಾರ್ಷಿಕದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಎರಡು ದಿನಗಳ ಜಿಲ್ಲಾ ಮಟ್ಟದ ವಿದ್ಯಾರ್ಥಿ ಶಿಬಿರವು ಅತ್ಯಂತ ಯಶಸ್ವಿಯಾಗಿ ಜರುಗಿತು.
ಜಿಲ್ಲೆಯ ವಿವಿಧ ಪದವಿ ಹಾಗೂ ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಸಂಘಟನೆಯ ಕಾರ್ಯಕರ್ತರು ಈ ಶಿಬಿರದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.
“ನಮ್ಮ ಆದರ್ಶಗಳು ಯಾರಾಗಬೇಕು ಮತ್ತು ಏಕೆ?” ಎಂಬ ವಿಷಯದ ಕುರಿತು ಮಾತನಾಡಿದ AIDSO ರಾಜ್ಯ ಉಪಾಧ್ಯಕ್ಷರಾದ ಅಪೂರ್ವ ಸಿ.ಎಂ., ಇಂದಿನ ಸಮಾಜದಲ್ಲಿ ಕೆಲವೇ ಶ್ರೀಮಂತರು ಬಹುಸಂಖ್ಯಾತ ಬಡವರನ್ನು ಶೋಷಿಸುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಈಶ್ವರಚಂದ್ರ ವಿದ್ಯಾಸಾಗರ, ಸಾವಿತ್ರಿಬಾಯಿ ಫುಲೆ, ಭಗತ್ ಸಿಂಗ್ ಮುಂತಾದ ಮಹಾನ್ ವ್ಯಕ್ತಿಗಳ ಜೀವನವನ್ನು ಉದಾಹರಿಸಿದ ಅವರು, ಬಂಗಲೆ-ಕಾರು ಗಳಿಸುವುದಕ್ಕಿಂತ ಸಿದ್ಧಾಂತಕ್ಕೆ ಬದ್ಧರಾಗಿ ಚಾರಿತ್ರ್ಯ ರೂಪಿಸಿಕೊಳ್ಳುವುದೇ ನೈಜ ಸಾಧನೆ ಎಂದರು.
“ಸಾಮಾಜಿಕ ಬದಲಾವಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ” ಕುರಿತು ಮಾತನಾಡಿದ ರಾಜ್ಯ ಕಚೇರಿ ಕಾರ್ಯದರ್ಶಿ ಮಹಾಂತೇಶ್, ದೇಶದ ಆರ್ಥಿಕ ಅಸಮಾನತೆ ಹಾಗೂ ಸರ್ಕಾರದ ಅಂಕಿ-ಅಂಶಗಳನ್ನು ಕಟು ಸತ್ಯಗಳೊಂದಿಗೆ ಬಿಚ್ಚಿಟ್ಟರು.
ದೇಶದ 1% ಶ್ರೀಮಂತರ ಬಳಿ 40% ಸಂಪತ್ತಿದ್ದರೆ, ಕೆಳಹಂತದ 50% ಜನರ ಬಳಿ ಕೇವಲ 3% ಸಂಪತ್ತಷ್ಟೇ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮಧ್ಯಾಹ್ನದ ಬಿಸಿಊಟದ ಅನುದಾನ ಹಾಗೂ ಉದ್ಯಮಿಗಳ ಅತಿವ್ಯಯದ ನಡುವಿನ ತಾರತಮ್ಯವನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದರು.
ಕೇವಲ ಬೌದ್ಧಿಕ ಗೋಷ್ಠಿಗಳಿಗೆ ಮಾತ್ರ ಸೀಮಿತವಾಗದೆ, ಶಿಬಿರದಲ್ಲಿ ವಿದ್ಯಾರ್ಥಿಗಳಿಗಾಗಿ ಸಿನಿಮಾ ಪ್ರದರ್ಶನ, ಥಿಯೇಟರ್ ಗೇಮ್ಸ್, ಗುಂಪು ಚರ್ಚೆಗಳು ಹಾಗೂ ಕ್ರೀಡಾ ಚಟುವಟಿಕೆಗಳು ಉತ್ಸಾಹದಿಂದ ಜರುಗಿದವು.
ಅಂತಿಮವಾಗಿ ವಿದ್ಯಾರ್ಥಿಗಳು ಭಗತ್ ಸಿಂಗ್ ಹಾಗೂ ನೇತಾಜಿ ಹಾದಿಯಲ್ಲಿ ಸಾಗಿ, ಶೋಷಣೆಯಹಿತ ಸಮಾಜವಾದಿ ಸಮಾಜ ನಿರ್ಮಾಣಕ್ಕಾಗಿ ಪಣತೊಡಬೇಕು ಎಂದು ಶಿಬಿರದಲ್ಲಿ ಕರೆ ನೀಡಲಾಯಿತು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
