ಕಠ್ಮಂಡು: ನೇಪಾಳ–ಚೀನಾ ಗಡಿಯಲ್ಲಿ ಸಂಭವಿಸಿದ ಹಿಮಕುಸಿತ ಹಾಗೂ ಭಾರಿ ಪ್ರವಾಹದಿಂದಾಗಿ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದ್ದು, ಮತ್ತೊಂದು ಭೀಕರ ಪ್ರವಾಹದ (ಜಲಪ್ರಳಯ) ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ನೇಪಾಳ ಸರ್ಕಾರವು ತುರ್ತು ರಕ್ಷಣಾ ಕಾರ್ಯಾಚರಣೆಯನ್ನು ತಕ್ಷಣವೇ ಸ್ಥಗಿತಗೊಳಿಸುವಂತೆ ಆದೇಶಿಸಿದ್ದು, ಭದ್ರತಾ ಸಿಬ್ಬಂದಿ ಹಾಗೂ ಸೈನಿಕರು ಕೂಡಲೇ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆ ನೀಡಿದೆ.
ಟಿಬೆಟ್ ಭಾಗದಲ್ಲಿ ನೀರಿನ ತಡೆಗೋಡೆ (ಡೆಬ್ರಿಸ್ ಡ್ಯಾಮ್) ಒಡೆದುಹೋಗಿರುವ ಮಾಹಿತಿ ಲಭ್ಯವಾಗಿದ್ದು, ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ ಸಿಬ್ಬಂದಿಗೂ ಹೊಸ ಅಪಾಯ ಎದುರಾಗಿದೆ. ಇದರಿಂದಾಗಿ ತುರ್ತು ಕಾರ್ಯಾಚರಣೆ ತಂಡಗಳನ್ನು ಒಂದು ಕಿಲೋಮೀಟರ್ ಹಿಂದಕ್ಕೆ ಕರೆಸಿಕೊಳ್ಳಲಾಗಿದೆ.
ನೇಪಾಳ ಮತ್ತು ಟಿಬೆಟ್ ನಲ್ಲಿ ಸಂಭವಿಸಿರುವ ಈ ಸುನಾಮಿಯಂತಹ ನೀರು ಮತ್ತು ಕೆಸರಿನ ಪ್ರವಾಹಕ್ಕೆ ಸಿಲುಕಿ ಈವರೆಗೆ 472ಕ್ಕೂ ಹೆಚ್ಚು ಮೃತದೇಹಗಳನ್ನು ಹೊರತೆಗೆಯಲಾಗಿದೆ.
ಹಿಮಾಲಯದಲ್ಲಿ ಚಾರಣಕ್ಕೆ ತೆರಳಿದ್ದವರು ಹಾಗೂ ಟಿಬೆಟ್‌ನ ಪವಿತ್ರ ಕೈಲಾಸ ಪರ್ವತಕ್ಕೆ ತೆರಳಿದ್ದ ಹಿಂದೂ ಯಾತ್ರಿಕರು ಸೇರಿದಂತೆ 1,400ಕ್ಕೂ ಅಧಿಕ ಜನರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ತ್ರಿಶೂಲಿ–3ಎ ಜಲವಿದ್ಯುತ್ ಯೋಜನೆಯ ಸುರಂಗದಲ್ಲಿ ಕೆಲವರು ಸಿಲುಕಿದ್ದು, ಅವರ ರಕ್ಷಣೆಗೆ ಸೇನೆ ಹೆಲಿಕಾಪ್ಟರ್‌ಗಳ ಮೂಲಕ ಕಾರ್ಯಾಚರಣೆ ಮುಂದುವರಿಸಿದೆ. ಆದರೆ ಪ್ರವೇಶ ದ್ವಾರಗಳು ಪತ್ತೆಯಾಗದಿರುವುದು ರಕ್ಷಣಾ ತಂಡಗಳಿಗೆ ಸವಾಲಾಗಿ ಪರಿಣಮಿಸಿದೆ.
ಟಿಬೆಟ್ ನ ಗೈರಾಂಗ್ ನಲ್ಲಿ ಪ್ರವಾಹದ ಅಪಾಯ ಹೆಚ್ಚಿರುವ ಕಾರಣ ಚೀನಾ ಕೂಡ ಶುಕ್ರವಾರ ರಕ್ಷಣಾ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.
2015ರ ಭೂಕಂಪದ ಬಳಿಕ ನೇಪಾಳ ಕಂಡ ಅತ್ಯಂತ ಭೀಕರ ದುರಂತ ಇದಾಗಿದ್ದು, ರಕ್ಷಣಾ ಸಿಬ್ಬಂದಿಯ ಸುರಕ್ಷತೆಗೆ ಮುನ್ನೆಚ್ಚರಿಕೆ ಕ್ರಮವಾಗಿ ಈ ತುರ್ತು ನಿರ್ಧಾರ ಕೈಗೊಳ್ಳಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
