ತುಮಕೂರು: ಸರ್ಕಾರದ ಆಡಳಿತ ವ್ಯವಸ್ಥಿತವಾಗಿ ನಡೆಯಬೇಕು. ಸರ್ಕಾರವೇ ಜನರ ಬಳಿ ಹೋಗಿ ಅವರ ಸಮಸ್ಯೆಗಳನ್ನು ಆಲಿಸಿ, ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಜನರು ತಮ್ಮ ಸಮಸ್ಯೆಗಳನ್ನು ಹೊತ್ತು ತಾಲ್ಲೂಕು, ಜಿಲ್ಲಾ ಮಟ್ಟದ ಅಧಿಕಾರಿಗಳ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಬೇಕು ಎಂಬ ಉದ್ದೇಶದಿಂದ ಪ್ರಜಾ ಸೇವಾ ಇಲಾಖೆಯನ್ನು ಇಂದಿನಿಂದ ಹೊಸದಾಗಿ ಆರಂಭಿಸಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ, ಕಂದಾಯ ಹಾಗೂ ಕ್ರೀಡಾ ಸಚಿವರಾದ ಡಾ. ಜಿ. ಪರಮೇಶ್ವರ ಹೇಳಿದರು.
ಕಂದಾಯ ಇಲಾಖೆಯ ಜವಾಬ್ದಾರಿಯನ್ನು ಮುಖ್ಯ ಮಂತ್ರಿಯವರು ನನಗೆ ವಹಿಸಿದ್ದಾರೆ. ದೇಶದಲ್ಲಿ ಹೊಸ–ಹೊಸ ಆವಿಷ್ಕಾರ ಮಾಡುವಾಗ ಕರ್ನಾಟಕ ರಾಜ್ಯವು ಮುಂದಿದೆ. ನಮ್ಮ ರಾಜ್ಯದ ಕಂದಾಯ ಇಲಾಖೆಯಲ್ಲಿ ಆಗಿರುವಂತಹ ದೊಡ್ಡ ಬದಲಾವಣೆಗಳು ದೇಶದಲ್ಲೇ ಬೇರೆಲ್ಲೂ ಆಗಿರಲಿಲ್ಲ. ಜಾರಿಗೆ ತಂದಿರುವ ಹಲವಾರು ಜನಪರ ಯೋಜನೆಗಳಿಂದ ಇಂತಹ ಬದಲಾವಣೆ ಸಾಧ್ಯವಾಗಿದೆ. ಇ ಪೌತಿ ಹಕ್ಕು, ಕಂದಾಯ ಗ್ರಾಮಗಳನ್ನು ಮಾಡಲಾಗುತ್ತಿದೆ ಎಂದು ಡಾ.ಜಿ.ಪರಮೇಶ್ವರ ತಿಳಿಸಿದರು.
ಪಟ್ಟಣದಲ್ಲಿ ಆಯೋಜಿಸಿದ್ದ ಮೊದಲ ಪ್ರಜಾ ಸೇವಾ ಅಭಿಯಾನ ಜನಸಭೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಸೆಪ್ಟೆಂಬರ್ 5 ನಮ್ಮಲ್ಲಿಗೂ ಆದರ್ಶಪ್ರಾಯರಾದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ ದಿನ ಇಡೀದೇಶದಲ್ಲಿ ಶಿಕ್ಷಕರ ದಿನಾಚರಣೆ ಆಚರಿಸಲಾಗುತ್ತಿದೆ. ಅದೇ ದಿನ ಪ್ರಜಾ ಸೇವಾ ಅಭಿಯಾನ ಆಚರಿಸಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನೀಡಿದ ಕರೆಯಂತೆ ಇಂದು ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಆಯಾ ಜಿಲ್ಲೆಗಳ ಉಸ್ತುವಾರಿ ಸಚಿವರು ಈ ನೂತನ ಕಾರ್ಯಕ್ಕೆ ಚಾಲನೆ ನೀಡುತ್ತಿದ್ದಾರೆ ಎಂದರು.
ಹೊಸದಾಗಿ ಸೃಜಿಸಲಾದ ಪ್ರಜಾ ಸೇವಾ ಇಲಾಖೆಯಡಿ ಯಾವುದೇ ಇಲಾಖೆಯ ಸಮಸ್ಯೆಗಳನ್ನು ನೇರವಾಗಿ ದಾಖಲಿಸಿದರೆ, ಸಂಬಂಧಪಟ್ಟ ಅಧಿಕಾರಿಗಳು ಅದನ್ನು ಸಕಾಲದಲ್ಲಿ ಪರಿಹರಿಸಿಕೊಡುವ ಕೆಲಸ ಮಾಡಿಕೊಡಬೇಕು ಎಂದು ತಿಳಿಸಿದರು.
ಗುಬ್ಬಿ ಶಾಸಕ ಹಾಗೂ ಕೆಎಸ್ ಆರ್ ಟಿಸಿ ಅಧ್ಯಕ್ಷ ಎಸ್. ಆರ್.ಶ್ರೀನಿವಾಸ್ ಮಾತನಾಡಿ, ಜನರ ಅನುಕೂಲಕ್ಕಾಗಿ ಮುಖ್ಯ ಮಂತ್ರಿಗಳ ಆಶಯದಂತೆ ಹೊಸದಾಗಿ ಪ್ರಜಾ ಸೇವಾ ಇಲಾಖೆಯನ್ನು ಸೃಜಿಸಿ ಪ್ರತಿ ತಿಂಗಳ ಮೊದಲ ಹಾಗೂ ಮೂರನೇ ಶನಿವಾರ ಪ್ರಜಾ ಸೇವಾ ಅಭಿಯಾನವನ್ನು ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಾತನಾಡಿ, ಸಾರ್ವಜನಿಕರು ತಮ್ಮ ಸಮಸ್ಯೆಗಳಿಗಾಗಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು, ಅವರ ಅಹವಾಲುಗಳನ್ನು ಸ್ವೀಕರಿಸಿ ಕಾಲಮಿತಿಯಲ್ಲಿ ವಿಲೇವಾರಿ ಮಾಡುವ ನಿಟ್ಟಿನಲ್ಲಿ ಸರ್ಕಾರ ಅಭಿಯಾನವನ್ನು ಆಯೋಜಿಸಲು ನಿರ್ದೇಶನ ನೀಡಿದ್ದು, ಅದರಂತೆ ಜಿಲ್ಲಾದ್ಯಂತ ಇಂದಿನಿಂದ ಪ್ರಜಾ ಸೇವಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾಡುಗೋಲ್ಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಹೇಶ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ದೀಪಾ ಚೋಳನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಜಿಲ್ಲಾ ಪಂಚಾಯತ್ ಸಿಇಒ ಅಶ್ವಿಜ .ಬಿ.ವಿ, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾದ್ಯಕ್ಷ ಚಂದ್ರಶೇಖರ್ ಗೌಡ ಮುಂತಾದವರು ಇದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
