ತುಮಕೂರು: ಜಿಲ್ಲಾಡಳಿತವು ನಗರದ ಗ್ರಂಥಾಲಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ‘ಜನತಾ ದರ್ಶನ’ ಕಾರ್ಯಕ್ರಮವು ತೀವ್ರ ಅವ್ಯವಸ್ಥೆಯಿಂದ ಕೂಡಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಜಿ. ಪರಮೇಶ್ವರ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಅಹವಾಲು ಸಲ್ಲಿಸಲು ಬಂದ ಸಾರ್ವಜನಿಕರು ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.
ಸಣ್ಣ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಿದ್ದರಿಂದ ತೀವ್ರ ಗೊಂದಲ ಉಂಟಾಯಿತು. ದೂರದ ಊರುಗಳಿಂದ ಆಶಾಭಾವನೆಯಿಂದ ಬಂದ ಜನರು ಮೂಲಸೌಕರ್ಯಗಳ ಕೊರತೆಯಿಂದ ಹೈರಾಣಾದರು.
ಸಚಿವರು ಮತ್ತು ಅಧಿಕಾರಿಗಳ ಮುಂದೆ ತಮ್ಮ ಅಳಲು ತೋಡಿಕೊಳ್ಳಲು ಪೊಲೀಸರು ಸಾರ್ವಜನಿಕರಿಗೆ ಸೂಕ್ತ ಕಾಲಾವಕಾಶ ನೀಡದೆ ತರಾತುರಿ ಮಾಡಿದರು ಎಂದು ಜನರು ದೂರಿದ್ದಾರೆ.
ವಸತಿ ಸೌಲಭ್ಯ, ನಿವೇಶನ ಹಂಚಿಕೆ, ಪೋಡಿ ಸಮಸ್ಯೆ, ಭೂಸ್ವಾಧೀನ ಪರಿಹಾರ ವಿಳಂಬ ಮತ್ತು ಬಿಪಿಎಲ್ ಕಾರ್ಡ್‌ಗಳ ರದ್ದತಿ ಕುರಿತು ಅತಿ ಹೆಚ್ಚು ದೂರುಗಳು ಕೇಳಿಬಂದವು.
ಹೇಮಾವತಿ ನಾಲೆಗಾಗಿ ಭೂಮಿ ಕಳೆದುಕೊಂಡು 12 ವರ್ಷಗಳಾದರೂ ಪರಿಹಾರ ಸಿಗದ ರೈತನ ಅಳಲನ್ನು ಆಲಿಸಿದ ಸಚಿವರು, ಮುಂದಿನ 10 ದಿನಗಳಲ್ಲಿ ಸಮಸ್ಯೆ ಬಗೆಹರಿಯದಿದ್ದರೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಕೊರಟಗೆರೆಯ 80 ವರ್ಷದ ರಂಗಮ್ಮ ಎಂಬುವವರ ಬಿಪಿಎಲ್ ಕಾರ್ಡ್ ಅಕಾರಣವಾಗಿ ರದ್ದಾಗಿದ್ದರಿಂದ ಪಡಿತರ ಮತ್ತು ಚಿಕಿತ್ಸೆಗೆ ತೊಂದರೆಯಾಗುತ್ತಿರುವುದನ್ನು ಗಮನಿಸಿದ ಸಚಿವರು, ತಕ್ಷಣ ಕ್ರಮ ಕೈಗೊಳ್ಳಲು ಆಹಾರ ಇಲಾಖೆಗೆ ಸೂಚಿಸಿದರು.
ಒಟ್ಟು 653ಕ್ಕೂ ಹೆಚ್ಚು ಅರ್ಜಿಗಳು:
- ಕಂದಾಯ ಇಲಾಖೆ: 450
- ಗ್ರಾಮೀಣಾಭಿವೃದ್ಧಿ ಇಲಾಖೆ: 43
- ತುಮಕೂರು ಮಹಾನಗರ ಪಾಲಿಕೆ: 37
- ಪೊಲೀಸ್ ಇಲಾಖೆ: 16
- ಆಹಾರ ಇಲಾಖೆ: 13
- ಇತರ ಇಲಾಖೆಗಳು: ಬೆಸ್ಕಾಂ, ಅರಣ್ಯ, ಆರೋಗ್ಯ ಸೇರಿದಂತೆ ವಿವಿಧ ಇಲಾಖೆಗಳಿಗೆ ಅರ್ಜಿಗಳು ಸಲ್ಲಿಕೆಯಾದವು.
ಜನತಾ ದರ್ಶನದ ವೇಳೆ ಪದೇ ಪದೇ ಪವರ್ ಕಟ್ ಉಂಟಾಗಿದ್ದು ಸಾರ್ವಜನಿಕರ ಮತ್ತು ಸಚಿವರ ಆಕ್ರೋಶಕ್ಕೆ ಕಾರಣವಾಯಿತು. ಅಲ್ಲದೆ, ಸಭಾಂಗಣವು ಕಿರಿದಾಗಿದ್ದರಿಂದ ನೂಕುನುಗ್ಗಲು ಉಂಟಾಗಿ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಈ ವೇಳೆ ಕೆಆರ್‌ಎಸ್ ಪಾರ್ಟಿ ಮುಖಂಡರು ಲೈವ್ ಮಾಡಲು ಮುಂದಾದಾಗ ಸಚಿವರು ಗರಂ ಆದ ಪ್ರಸಂಗವೂ ನಡೆಯಿತು.
ಸಿರಾ ಮಹಿಳೆಯ ಅಳಲು: ಸಿರಾ ನಗರದ ನಿವಾಸಿ ರಾಬಿಯಾ ಅಸ್ಲಾಂ ಪಾಷ ಎಂಬ ಮಹಿಳೆ, ತಮಗೆ ಮಂಜೂರಾಗಿರುವ ನಿವೇಶನಕ್ಕೆ ಹಕ್ಕುಪತ್ರ ನೀಡದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. “ನನಗೆ ಗೃಹಲಕ್ಷ್ಮಿ, ಗೃಹಜ್ಯೋತಿ ಬೇಡ, ನನ್ನ ಹಕ್ಕುಪತ್ರ ಕೊಡಿಸಿ,” ಎಂದು ಸಚಿವರ ಮುಂದೆ ಕಣ್ಣೀರಿಟ್ಟರು.
ಜನತಾ ದರ್ಶನಕ್ಕೆ ಹರಿದುಬಂದ ಸಾವಿರಾರು ಅರ್ಜಿಗಳನ್ನು ಗಮನಿಸಿದ ಸಚಿವರು, ತಾಲೂಕು ಮಟ್ಟದ ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. “ತಾಲೂಕು ಹಂತದಲ್ಲಿ ತಹಶೀಲ್ದಾರ್ ಮತ್ತು ಇತರೆ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿದ್ದರೆ ಜನರು ಇಷ್ಟೊಂದು ಸಂಖ್ಯೆಯಲ್ಲಿ ಇಲ್ಲಿಗೆ ಬರುತ್ತಿರಲಿಲ್ಲ. ಸಣ್ಣಪುಟ್ಟ ಕೆಲಸಗಳಿಗೂ ಜನ ಅಲೆಯುವಂತಾಗಿರುವುದು ವಿಷಾದನೀಯ,” ಎಂದು ಸಚಿವರು ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ಬಿ. ಸುರೇಶ್ ಗೌಡ, ಜಿ.ಬಿ. ಜ್ಯೋತಿಗಣೇಶ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ವ್ಯವಸ್ಥಿತವಾಗಿ ನಡೆಯಬೇಕಿದ್ದ ಜನತಾ ದರ್ಶನವು ನಿರ್ವಹಣೆಯ ಕೊರತೆಯಿಂದಾಗಿ ಬಂದಿದ್ದ ಜನರಿಗೆ ನೆಮ್ಮದಿಯ ಬದಲು ಕಿರಿಕಿರಿ ನೀಡಿತು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


