ತುಮಕೂರು: ನಗರದ ಹೊರವಲಯದಲ್ಲಿರುವ ಬೆಳಗುಂಬ ರಸ್ತೆಯ ಸಿದ್ಧರಾಮೇಶ್ವರ ಬಡಾವಣೆಯಲ್ಲಿ ನಿರ್ಮಾಣವಾಗಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿ ನಿಲಯವು ಉದ್ಘಾಟನೆಗೆ ಮುನ್ನವೇ ಹಾಳುಕೊಂಪೆಯಾಗಿ ಮಾರ್ಪಟ್ಟಿದೆ. ಸುಮಾರು ₹1 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಕಟ್ಟಡವು ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಈಗ ಬಿರುಕು ಬಿಟ್ಟಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಕಾಲೇಜು ಶಿಕ್ಷಣ ಇಲಾಖೆಯಿಂದ ಎಸ್‌ಸಿಎಸ್‌ಪಿ–ಟಿಎಸ್‌ಪಿ ಅನುದಾನದಡಿ ಈ ಹಾಸ್ಟೆಲ್ ನಿರ್ಮಾಣಕ್ಕೆ 2013-14ರಲ್ಲಿ ಮಂಜೂರಾತಿ ನೀಡಲಾಗಿತ್ತು. 2016ರಲ್ಲಿ ಭೂಮಿ ಪೂಜೆ ನೆರವೇರಿಸಿ ಕಾಮಗಾರಿ ಆರಂಭಿಸಲಾಯಿತು. ಸುಮಾರು ಆರು ವರ್ಷಗಳ ಕಾಲ ನಡೆದ ಕಾಮಗಾರಿ 2022ರಲ್ಲಿ ಪೂರ್ಣಗೊಂಡಿತ್ತು. ಆದರೆ, ಕಾಮಗಾರಿ ಮುಗಿದು ಐದು ವರ್ಷ ಕಳೆದರೂ ಈ ಕಟ್ಟಡಕ್ಕೆ ಉದ್ಘಾಟನೆಯ ಭಾಗ್ಯ ಮಾತ್ರ ದೊರೆತಿಲ್ಲ.
ಬಳಕೆಗೆ ಬರುವ ಮುನ್ನವೇ ಕಟ್ಟಡದ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಕಳಪೆ ಕಾಮಗಾರಿಯ ಶಂಕೆ ವ್ಯಕ್ತವಾಗಿದೆ. ಹಾಸ್ಟೆಲ್ ಮುಂಭಾಗದಲ್ಲಿ ಸ್ವಚ್ಛತೆ ಇಲ್ಲದೆ ಗಿಡಗಂಟಿಗಳು ಬೆಳೆದು ನಿಂತಿವೆ. ಕಟ್ಟಡದ ಸುತ್ತಮುತ್ತ ಹಾಳು ಕೊಂಪೆಯಂತಾಗಿದೆ. ಕಟ್ಟಡ ಹಸ್ತಾಂತರದ ವಿಚಾರವಾಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಕಾಲೇಜು ಶಿಕ್ಷಣ ಇಲಾಖೆಯ ನಡುವೆ ಹಲವು ಬಾರಿ ಪತ್ರ ವ್ಯವಹಾರಗಳು ನಡೆದಿದ್ದರೂ, ಯಾವುದೇ ಸ್ಪಷ್ಟ ನಿರ್ಧಾರಕ್ಕೆ ಬರಲು ಅಧಿಕಾರಿಗಳು ವಿಫಲರಾಗಿದ್ದಾರೆ.
ತುಮಕೂರು ಜಿಲ್ಲಾ ಕೇಂದ್ರದಲ್ಲಿ ಹಾಸ್ಟೆಲ್ ಸೌಲಭ್ಯಕ್ಕಾಗಿ ಪ್ರತಿ ವರ್ಷ ಸಾವಿರಾರು ವಿದ್ಯಾರ್ಥಿಗಳು ಬೇಡಿಕೆ ಇಡುತ್ತಾರೆ. ಹಾಸ್ಟೆಲ್ ಸೀಟು ಸಿಗದ ವಿದ್ಯಾರ್ಥಿಗಳು ನಗರದ ವಿವಿಧೆಡೆ ಬಾಡಿಗೆ ರೂಮ್‌ಗಳನ್ನು ಮಾಡಿಕೊಂಡು ಹೆಚ್ಚಿನ ವೆಚ್ಚ ಭರಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸುಸಜ್ಜಿತವಾಗಿ ನಿರ್ಮಾಣಗೊಂಡ ಕಟ್ಟಡವೊಂದು ಬಳಕೆಯಾಗದೆ ಪಾಳು ಬೀಳುತ್ತಿರುವುದು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ನಗರದ ಹೊರವಲಯದಲ್ಲಿ ಕಟ್ಟಡ ಇರುವುದರಿಂದ ಅಧಿಕಾರಿಗಳು ಅತ್ತ ಗಮನ ಹರಿಸುತ್ತಿಲ್ಲ ಮತ್ತು ಸ್ಥಳೀಯ ಜನಪ್ರತಿನಿಧಿಗಳು ಈ ಬಗ್ಗೆ ಮೌನ ವಹಿಸಿರುವುದು ದುರದೃಷ್ಟಕರ ಎಂದು ಸ್ಥಳೀಯರು ದೂರಿದ್ದಾರೆ. ಕೋಟ್ಯಂತರ ರೂಪಾಯಿ ಸಾರ್ವಜನಿಕ ಹಣ ಪೋಲಾಗುತ್ತಿದ್ದು, ಸಂಬಂಧಪಟ್ಟ ಇಲಾಖೆಯು ಕೂಡಲೇ ಎಚ್ಚೆತ್ತುಕೊಂಡು ಕಟ್ಟಡವನ್ನು ದುರಸ್ತಿಪಡಿಸಿ ವಿದ್ಯಾರ್ಥಿಗಳ ಬಳಕೆಗೆ ಮುಕ್ತಗೊಳಿಸಬೇಕಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


