ಕೊರಟಗೆರೆ (ತುಮಕೂರು): ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಭಾನುವಾರ ತಾಲೂಕಿನ ಥರಟಿ ಗ್ರಾಮದಲ್ಲಿ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಡಿ ನಿರ್ಮಿಸಲಾಗುತ್ತಿರುವ ‘ಶುದ್ಧ ಕುಡಿಯುವ ನೀರಿನ ಘಟಕ’ಕ್ಕೆ ಭೂಮಿ ಪೂಜೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಗ್ರಾಮೀಣ ಭಾಗದ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವುದು ಸರ್ಕಾರದ ಆದ್ಯತೆಯಾಗಿದೆ ಎಂದು ತಿಳಿಸಿದರು.
ಶಂಕುಸ್ಥಾಪನೆ ಕಾರ್ಯಕ್ರಮಕ್ಕೂ ಮುನ್ನ ಸಚಿವರು ಹೊಸಪಾಳ್ಯ ಮತ್ತು ದುರ್ಗದ ನಾಗೇನಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಸಂವಾದ ನಡೆಸಿದರು. ಈ ವೇಳೆ ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಸಚಿವರ ಮುಂದೆ ಬಿಚ್ಚಿಟ್ಟರು. ಜನರ ಅಹವಾಲುಗಳನ್ನು ಆಲಿಸಿದ ಸೋಮಣ್ಣ, ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ನಂತರ ತುಂಬಾಡಿ ಗ್ರಾಮಕ್ಕೆ ಭೇಟಿ ನೀಡಿದ ಸಚಿವರು, ಸುಮಾರು ₹1 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ನೂತನ ಶಾಲಾ ಕಟ್ಟಡದ ಕಾಮಗಾರಿಗೂ ಭೂಮಿ ಪೂಜೆ ನೆರವೇರಿಸಿದರು. ಶಿಕ್ಷಣಕ್ಕೆ ಪೂರಕವಾದ ಮೂಲಸೌಕರ್ಯಗಳನ್ನು ಒದಗಿಸಲು ತಾವು ಬದ್ಧರಾಗಿರುವುದಾಗಿ ಅವರು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಪಿ.ಆರ್. ಸುಧಾಕರ್ ಲಾಲ್, ತಹಶೀಲ್ದಾರ್ ಮಂಜುನಾಥ್, ಸ್ಥಳೀಯ ಮುಖಂಡರಾದ ಅನಿಲ್ ಕುಮಾರ್, ರುದ್ರೇಶ್, ಕಾಮರಾಜು ಸೇರಿದಂತೆ ಹಲವು ಗಣ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


