ಬೆಂಗಳೂರು: ನಗರದ ಮಹದೇವಪುರದಲ್ಲಿ ಮಹೀಂದ್ರಾ ಶೋರೂಂನ ಟೆಸ್ಟ್ ಡ್ರೈವ್ ಕಾರೊಂದು ಭೀಕರ ಸರಣಿ ಅಪಘಾತ ಎಸಗಿದ್ದು, ಘಟನೆಯಲ್ಲಿ ಓರ್ವ ಪಾದಚಾರಿಯ ಕಾಲು ಮುರಿದು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮಹದೇವಪುರದ ಮುಖ್ಯರಸ್ತೆಯಲ್ಲಿರುವ ಮಹೀಂದ್ರಾ ಶೋರೂಂನಿಂದ ವ್ಯಕ್ತಿಯೊಬ್ಬರು ಟೆಸ್ಟ್ ಡ್ರೈವ್ ಗಾಗಿ ಕಾರನ್ನು ಹೊರತಂದಿದ್ದರು. ಈ ವೇಳೆ ಕಾರು ಚಲಾಯಿಸುತ್ತಿದ್ದ ಗ್ರಾಹಕ ಕುಡಿದ ಅಮಲಿನಲ್ಲಿದ್ದ ಎನ್ನಲಾಗಿದ್ದು, ವಾಹನದ ಮೇಲಿನ ನಿಯಂತ್ರಣ ತಪ್ಪಿ ರಸ್ತೆಯಲ್ಲಿದ್ದ ನಾಲ್ಕು ವಾಹನಗಳಿಗೆ ಸರಣಿ ಡಿಕ್ಕಿ ಹೊಡೆದಿದ್ದಾನೆ.
ಅಪಘಾತದ ರಭಸಕ್ಕೆ ನಾಲ್ಕು ವಾಹನಗಳು ಜಖಂಗೊಂಡಿವೆ. ಇದೇ ಸಮಯದಲ್ಲಿ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಪಾದಚಾರಿಯೊಬ್ಬರಿಗೆ ಕಾರು ಡಿಕ್ಕಿ ಹೊಡೆದಿದ್ದು, ಅವರ ಕಾಲು ಮುರಿದಿದೆ. ಗಾಯಾಳುವನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕುಡಿದ ಅಮಲಿನಲ್ಲಿದ್ದ ವ್ಯಕ್ತಿಗೆ ಚಾಲನೆ ಮಾಡಲು ಕಾರು ನೀಡಿದ ಶೋರೂಂ ಸಿಬ್ಬಂದಿಯ ಬೇಜವಾಬ್ದಾರಿತನದ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟೆಸ್ಟ್ ಡ್ರೈವ್ ನೀಡುವ ಮುನ್ನ ಚಾಲಕನ ಸ್ಥಿತಿಯನ್ನು ಪರಿಶೀಲಿಸದೆ ವಾಹನ ನೀಡಿದ್ದೇ ಈ ಅನಾಹುತಕ್ಕೆ ಕಾರಣ ಎಂದು ಜನರು ಆರೋಪಿಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿರುವ ಮಹದೇವಪುರ ಸಂಚಾರಿ ಪೊಲೀಸರು ವಾಹನಗಳನ್ನು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


