ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಮಂಡ್ಯದ ಆದಿಚುಂಚನಗಿರಿ ಮಠದ ಕಾರ್ಯಕ್ರಮಕ್ಕೆ ಭೇಟಿ ನೀಡಿದ್ದಾಗ, ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಿವಿಯಲ್ಲಿ ಗುಟ್ಟಾಗಿ ಮಾತನಾಡಿದ್ದ ಫೋಟೋ ರಾಜ್ಯ ರಾಜಕೀಯದಲ್ಲಿ ದೊಡ್ಡ ಮಟ್ಟದ ಚರ್ಚೆ ಮತ್ತು ಕುತೂಹಲಕ್ಕೆ ಕಾರಣವಾಗಿತ್ತು. ಇಂದು ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಈ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ.
“ನಮ್ಮ ನಡುವೆ ಯಾವುದೇ ರಾಜಕೀಯ ಗುಪ್ತ ಆಲೋಚನೆಗಳು ನಡೆದಿಲ್ಲ. ಪ್ರಧಾನಿಯವರು ಮಹಿಳಾ ಮೀಸಲಾತಿ ಕುರಿತಾದ ನನ್ನ ವೈಯಕ್ತಿಕ ಅಭಿಪ್ರಾಯವನ್ನು ಕೇಳಿದರು. ಅದಕ್ಕೆ ನಾನು ‘ನಾವು ಮಹಿಳಾ ಮೀಸಲಾತಿಯ ಪರವಾಗಿದ್ದೇವೆ’ ಎಂದು ಸಕಾರಾತ್ಮಕವಾಗಿ ಉತ್ತರಿಸಿದೆ,” ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಮಹಿಳಾ ಮೀಸಲಾತಿ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದ ಅವರು, ಸಾಮಾಜಿಕ ನ್ಯಾಯದ ಮೇಲೆ ನಂಬಿಕೆಯಿದ್ದರೆ 2023ರಲ್ಲೇ ಇದನ್ನು ಜಾರಿಗೆ ತರಬೇಕಿತ್ತು ಎಂದರು.
ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆಯಲ್ಲಿ ಜನಸಂಖ್ಯೆಯನ್ನು ನಿಯಂತ್ರಿಸಿರುವ ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯವಾಗಬಾರದು. ಹೊಸ ಜನಗಣತಿಯ ಆಧಾರದ ಮೇಲೆ ಸಮಾನ ಹಂಚಿಕೆಯಾಗಬೇಕು ಎಂಬುದು ನಮ್ಮ ಒತ್ತಾಯ ಎಂದು ಸಿಎಂ ಹೇಳಿದರು.
ಹಿಂದೆ ಕಾಂಗ್ರೆಸ್ ನ ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂದು ಟೀಕಿಸಿದ್ದ ಪ್ರಧಾನಿ ಮತ್ತು ಬಿಜೆಪಿ ನಾಯಕರು, ಈಗ ಅದೇ ಯೋಜನೆಗಳನ್ನು ನಕಲು ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ತಮಿಳುನಾಡಿನಲ್ಲಿ ಡಿಎಂಕೆ ಮತ್ತು ಕೇರಳದಲ್ಲಿ ಕಾಂಗ್ರೆಸ್ ಮೈತ್ರಿಕೂಟ ಜಯಗಳಿಸಲಿದೆ ಎಂದು ಸಿಎಂ ಇದೇ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


